ಸೌದಿ ಅರೇಬಿಯಾದ ಮದೀನಾ ಬಳಿ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ – ಟ್ಯಾಂಕರ್ ಮದ್ಯೆ ಭೀಕರ ಅಪಘಾತ ಸಂಭವಿಸಿದೆ. ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ, ಬಸ್‌ನಲ್ಲಿದ್ದ 45 ಭಾರತೀಯರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ರಯಾಣಿಕರು ನಿದ್ರಿಸುತ್ತಿದ್ದ ಕಾರಣ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೃತರಲ್ಲಿ ಕನಿಷ್ಠ 11 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆ.
ಮೃತಪಟ್ಟವರಲ್ಲಿ ಕನಿಷ್ಠ 16 ಮಂದಿ ಹೈದರಾಬಾದ್‌ನ ಮಲ್ಲೇಪಳ್ಳಿಯ ಬಜಾರ್‌ಘಾಟ್ ಪ್ರದೇಶದ ನಿವಾಸಿಗಳೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ನವೆಂಬರ್ 9ರಂದು ಹೈದರಾಬಾದ್‌ನಿಂದ ತೆರಳಿದ ಈ ಗುಂಪು ಮೆಕ್ಕಾದಲ್ಲಿ ಉಮ್ರಾ ವಿಧಿ ಪೂರ್ಣಗೊಳಿಸಿ ಮದೀನಾಕ್ಕೆ ಹಿಂತಿರುಗುತ್ತಿರುವಾಗ ಈ ದುರಂತ ಸಂಭವಿಸಿದೆ. ಎರಡು ಹೈದರಾಬಾದ್ ಮೂಲದ ಪ್ರವಾಸ ಏಜೆನ್ಸಿಗಳ ಮೂಲಕ 42 ಯಾತ್ರಿಕರು ಪ್ರಯಾಣಿಸುತ್ತಿದ್ದರು.
ವಿದೇಶಾಂಗ ಸಚಿವ S. ಜೈಶಂಕರ್ ಘಟನೆ ಕುರಿತು ಆಘಾತ ವ್ಯಕ್ತಪಡಿಸಿ ಪೀಡಿತ ಕುಟುಂಬಗಳಿಗೆ ಸಹಾನುಭೂತಿ ತಿಳಿಸಿದರು. ಜೆಡ್ಡಾದ ಭಾರತೀಯ ಕಾನ್ಸುಲೇಟ್ 24×7 ನಿಯಂತ್ರಣ ಕೊಠಡಿಯನ್ನು ತೆರೆಯುತ್ತಿದ್ದು, ತುರ್ತು ಸಹಾಯಕ್ಕಾಗಿ ಟೋಲ್-ಫ್ರೀ 8002440003 ಅನ್ನು ಪ್ರಕಟಿಸಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಮೃತರ ವಿವರಗಳನ್ನು ತಕ್ಷಣ ಸಂಗ್ರಹಿಸುವಂತೆ ಸೂಚಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

