ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ನಿಜವಾದ ಎಂಟರ್‌ಟೇನರ್ ಎಂದರೆ ಅದು ಗಿಲ್ಲಿ ನಟನೇ ಎಂಬ ಅಭಿಪ್ರಾಯ ಮನೆ ಮಾಡಿದೆ. ತನ್ನ ಅದ್ಭುತ ಕಾಮಿಡಿ ಟೈಮಿಂಗ್, ಸ್ಪಾಟ್‌ನಲ್ಲಿ ಹೊಡೆಯುವ ಪಂಚ್ ಡೈಲಾಗ್ಸ್ ಮತ್ತು ವ್ಯಂಗ್ಯಭರಿತ ಮಾತಿನ ಶೈಲಿಯಿಂದ ಗಿಲ್ಲಿ ನಟ ಭರ್ಜರಿ ಫ್ಯಾನ್‌ಬೇಸ್ ಗಳಿಸಿಕೊಂಡಿದ್ದಾರೆ. ಯಾವುದೇ ತಯಾರಿಯಿಲ್ಲದೆ ತಕ್ಷಣವೇ ಕಾಮಿಡಿ ಸೃಷ್ಟಿಸುವ ಅವರ ಪ್ರತಿಭೆಗೆ ಹಲವರ ಮೆಚ್ಚುಗೆ ದೊರಕಿದೆ. ಇದೇ ಸಂದರ್ಭದಲ್ಲಿ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ಬಿಸಿ ನೀರಿನ ಬಕೆಟ್ ಕೇಳಿದ್ದ ಗಿಲ್ಲಿ ನಟನಿಗೆ ರಿಷಾ ಕೊಡದೇ ಬಾಗಿಲು ಹಾಕಿಕೊಂಡಿದ್ದರು. ಬಳಿಕ ಬಕೆಟ್ ತುಂಬಿದರೂ ಕೂಡ ರಿಷಾ ಅದನ್ನು ನೀಡಲಿಲ್ಲ. ಇದರಿಂದ ಕೋಪಗೊಂಡ ಗಿಲ್ಲಿ ನಟ, ರಿಷಾ ಅವರ ಸ್ನಾನದ ಪ್ರದೇಶದಲ್ಲಿ ಅವರ ಬಟ್ಟೆಗಳನ್ನು ಇರಿಸಿದ್ದರು. ಅದನ್ನು ಕಂಡ ರಿಷಾ ಕೋಪದಿಂದ ಗಿಲ್ಲಿ ನಟನಿಗೆ ತಳ್ಳಿಹಾಕಿ ಹೊಡೆದಿದ್ದರು. ಇದರಿಂದ ‘ಬಿಗ್ ಬಾಸ್’ ಮನೆಯ ಮೂಲ ನಿಯಮ ಉಲ್ಲಂಘನೆಯಾಯಿತು. ಇದೆಲ್ಲದ ನಂತರ ಗಿಲ್ಲಿ ನಟ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಯಿತು.
ದೂರಿನಲ್ಲಿ ರಿಷಾ ಗೌಡ ಅವರ ಬಟ್ಟೆಗಳನ್ನು ಮುಟ್ಟಿದ್ದು, ಮಹಿಳೆಯರಿಗಿರುವ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮಹಿಳಾ ಆಯೋಗ ಫುಟೇಜ್ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ದೃಷ್ಟಿಗೋಚರಕ್ಕೆ ಗಿಲ್ಲಿ ನಟ ತಪ್ಪಾಗಿ ನಡೆದುಕೊಂಡಿದ್ದಾರೆ ಎಂಬ ಸಾಕ್ಷಿ ಸಿಕ್ಕಿಲ್ಲ. ಆದ್ದರಿಂದ ದೂರನ್ನು ಲೀಗಲ್ ಟೀಮ್‌ಗೆ ಕಳುಹಿಸಲಾಗಿದೆ.
ರಿಷಾ ಅವರ ಬಟ್ಟೆಗಳನ್ನು ಮುಟ್ಟಿದ ಕಾರಣಕ್ಕೆ ಗಿಲ್ಲಿ ನಟಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಗಿಲ್ಲಿ ನಟನ ಮೇಲೆ ದಾಳಿ ನಡೆಸಿ ‘ಬಿಗ್ ಬಾಸ್’ ಮನೆ ನಿಯಮ ಉಲ್ಲಂಘಿಸಿದ್ದು ರಿಷಾ ಎಂಬ ಕಾರಣಕ್ಕೆ, ಸ್ಪರ್ಧಿಗಳಿಗೆ ರೆಡ್ ಕಾರ್ಡ್ ಮೂಲಕ ಎಲಿಮಿನೇಷನ್ ಅಥವಾ ಎಲ್ಲೋ ಕಾರ್ಡ್ ಮೂಲಕ ವಾರ್ನಿಂಗ್ ನೀಡುವ ಆಯ್ಕೆ ನೀಡಲಾಯಿತು. ಗಿಲ್ಲಿ ನಟ ಸೇರಿದಂತೆ ಎಲ್ಲರೂ (ಮಾಳು ಒಬ್ಬರನ್ನು ಹೊರತುಪಡಿಸಿ) ರಿಷಾಗೆ ಎಲ್ಲೋ ಕಾರ್ಡ್ ನೀಡಿದರು. ವಾರ್ನಿಂಗ್ ಮೇರೆಗೆ ರಿಷಾ ಮುಂದುವರೆದು ಮನೆಯಲ್ಲೇ ಉಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

