Tuesday, November 18, 2025

Latest Posts

ವಿಪರೀತ ಚಳಿ-ಸಾಧಾರಣ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

- Advertisement -

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯಾಗುವ ಸಾಧ್ಯತೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಹೆಚ್ಚಿದ್ದು, ಕಲ್ಯಾಣ ಕರ್ನಾಟಕದಲ್ಲಿ ತೀವ್ರ ಚಳಿಯ ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರದಲ್ಲಿ ಮೋಡಕವಿದ ಆಕಾಶ ಮತ್ತು ಕೆಲವೆಡೆ ಲಘು ಮಳೆಯ ಸೂಚನೆ ನೀಡಲಾಗಿದೆ.

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು. ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಲಘು ಮಳೆಯ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಇದೇ ವೇಳೆ ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣಹವೆಯೇ ಮುಂದುವರಿಯಲಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಹ ಒಣಹವೆಯ ವಾತಾವರಣ ಕಾಣಿಸಿಕೊಳ್ಳಲಿದೆ ಎಂದು ವರದಿ ಸ್ಪಷ್ಟಪಡಿಸಿದೆ. ನವೆಂಬರ್ 18ರಿಂದ 21ರವರೆಗೆ ರಾಜ್ಯದ ವಿಶೇಷವಾಗಿ ಉತ್ತರ ಒಳನಾಡು ಪ್ರದೇಶಗಳಲ್ಲಿ ವಿಪರೀತ ಚಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈಗ 14°C ತಾಪಮಾನ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 4 ರಿಂದ 6 ಡಿಗ್ರಿ ಸೆಲ್ಸಿಯಸ್ ತಾಪಮಾನ ಕುಸಿಯುವ ಸಾಧ್ಯತೆ ಇದೆ. ಜನರು ಅಗತ್ಯವಿಲ್ಲದೆ ಮನೆಯಿಂದ ಹೊರಬರದೆ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ. ನವೆಂಬರ್ 21ರ ನಂತರ ತಾಪಮಾನದಲ್ಲಿ ಸುಧಾರಣೆ ಕಂಡುಬರಬಹುದು ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 27°C ಮತ್ತು ಕನಿಷ್ಠ 17°C ಇರಬಹುದು. ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss