Tuesday, November 18, 2025

Latest Posts

ಉಗ್ರರನ್ನ ಪಾತಾಳದಲ್ಲಿದ್ರೂ ಬಿಡುವುದಿಲ್ಲ – ಶಾ ಪ್ರತಿಜ್ಞೆ

- Advertisement -

ದೆಹಲಿಯಲ್ಲಿ ನಡೆದ ಕಾರು ಸ್ಫೋಟಕ್ಕೆ ಕಾರಣರಾದವರನ್ನು ಪಾತಾಳದಲ್ಲಿದ್ದರೂ ಪತ್ತೆ ಹಚ್ಚಿ, ಕಠಿಣ ಶಿಕ್ಷೆ ವಿಧಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಜ್ಞೆ ಕೈಗೊಂಡಿದ್ದಾರೆ. ಫರಿದಾಬಾದ್‌ನಲ್ಲಿ ನಡೆದ ಉತ್ತರ ವಲಯ ಮಂಡಳಿಯ 32ನೇ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಯೋತ್ಪಾದನೆಯನ್ನು ಬೇರು-ಸಮೇತ ನಿರ್ಮೂಲನೆ ಮಾಡುವುದು ಸರ್ಕಾರದ ದೃಢಬದ್ಧತೆಯಾಗಿದೆ ಎಂದು ಹೇಳಿದರು.ದೆಹಲಿ ಬಾಂಬ್‌ ಸ್ಫೋಟದ ಅಪರಾಧಿಗಳು ಎಲ್ಲಿದ್ದರೂ ಅವರಿಗೆ ತಪ್ಪಿಸಿ ಹೋಗುವ ಅವಕಾಶ ಇಲ್ಲ. ಅವರನ್ನು ಪತ್ತೆ ಮಾಡಿ ಕಾನೂನಿನ ಮುಂದೆ ಹಾಜರುಪಡಿಸಿ, ಸಾಧ್ಯವಾದಷ್ಟು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಶಾ ಹೇಳಿದರು. ಸಭೆಯ ಆರಂಭದಲ್ಲಿ ಕೆಂಪುಕೋಟೆ ಬಳಿ ಕಾರ್‌ ಬಾಂಬ್‌ ಸ್ಫೋಟ ಮತ್ತು ಜಮ್ಮು–ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ದುರಂತಗಳಲ್ಲಿ ಮೃತಪಟ್ಟವರಿಗೆ ಎರಡು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೋದಿಯವರ ದೃಷ್ಟಿಕೋನ ಪ್ರಕಾರ ಬಲಿಷ್ಠ ರಾಜ್ಯಗಳು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಆಧಾರಸ್ತಂಭ. ಈ ಗುರಿ ಸಾಧಿಸುವಲ್ಲಿ ಪ್ರಾದೇಶಿಕ ಮಂಡಳಿಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು. ಸಂವಾದ, ಸಹಕಾರ, ಸಮನ್ವಯ ಮತ್ತು ನೀತಿನಿರ್ಮಾಣದಲ್ಲಿ ಈ ಮಂಡಳಿಗಳು ಪ್ರಮುಖವಾಗಿದ್ದು, ಅನೇಕ ಸಮಸ್ಯೆಗಳನ್ನು ಇವುಗಳ ಮೂಲಕ ಪರಿಹರಿಸಲಾಗಿದೆ ಎಂಬುದನ್ನು ಶಾ ಉಲ್ಲೇಖಿಸಿದರು.

ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಅಪರಾಧ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಒದಗಿಸುವುದು ಅಗತ್ಯ. ಅಪೌಷ್ಟಿಕತೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ದೇಶವನ್ನು ಮುಕ್ತಗೊಳಿಸಬೇಕಿದೆ. ಪೋಕ್ಸೋ ಕಾಯ್ದೆಯಡಿ ಲೈಂಗಿಕ ಅಪರಾಧಗಳು ಹಾಗೂ ಅತ್ಯಾಚಾರ ಪ್ರಕರಣಗಳಿಗೆ ತ್ವರಿತ ತನಿಖೆ ಮತ್ತು ಫಾಸ್ಟ್ ಟ್ರ್ಯಾಕ್ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆ ಎಂದು ಶಾ ಸ್ಪಷ್ಟಪಡಿಸಿದರು.

ನವೆಂಬರ್ 10ರಂದು ಸಂಜೆ ದೆಹಲಿಯ ಕೆಂಪುಕೋಟೆ ಬಳಿ i20 ಕಾರಿನಲ್ಲಿ ಸ್ಫೋಟಕಗಳು ಭಾರೀ ಪ್ರಮಾಣದಲ್ಲಿ ಸಿಡಿದು, ಹಲವರು ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದಾರೆ. ಅದೇ ರೀತಿ, ಜಮ್ಮುನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ರಾಸಾಯನಿಕಗಳು ಸಂಗ್ರಹಿಸಲಾದ ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss