Tuesday, November 18, 2025

Latest Posts

ಖರ್ಗೆ ಜೊತೆ ಸೀಕ್ರೆಟ್‌ ಸಭೆ – ಗುಟ್ಟು ಬಿಟ್ಟು ಕೊಡದ ಡಿಕೆ

- Advertisement -

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜಕೀಯ ಚರ್ಚೆಗೆ ಭೇಟಿ ಮಾಡಿಲ್ಲ. ಪಕ್ಷದ ಹೊಸ ಕಚೇರಿ ಶಿಲಾನ್ಯಾಸ ದಿನಾಂಕ ನಿಗದಿಗಾಗಿ ಮಾತ್ರ ಮನವಿ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಗೆ ಹೋಗುವಾಗ ನಮ್ಮ ಹಿರಿಯ ನಾಯಕರನ್ನು ಭೇಟಿ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ರಾಜಕೀಯ ವಿಷಯವಾಗಿ ಯಾವುದೇ ಚರ್ಚೆ ನಡೆಯಲಿಲ್ಲ. ನಾನು ಡಿಸಿಎಂ ಮಾತ್ರವಲ್ಲ, ಪಕ್ಷದ ರಾಜ್ಯ ಅಧ್ಯಕ್ಷನೂ ಆಗಿದ್ದೇನೆ. ಈವರೆಗೆ ಖರ್ಗೆ ಅವರು ಬಿಹಾರ ಚುನಾವಣೆಯಲ್ಲಿ ನಿರತರಾಗಿದ್ದರಿಂದ ಅವರಿಗೆ ತೊಂದರೆ ಕೊಡಲಿಲ್ಲ. ಡಿಸೆಂಬರ್ 1ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಇದರ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದರು.

ನಾನು ಯಾವುದೇ ಹಿರಿಯ ನಾಯಕರನ್ನು ರಾಜಕೀಯ ಕಾರಣಕ್ಕೆ ಭೇಟಿ ಮಾಡಿಲ್ಲ. ಮೇಕೆದಾಟು ಯೋಜನೆ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ನ್ಯಾಯಾಲಯ ನಮ್ಮ ಪರವಾಗಿ, ಯೋಜನೆ ಮುಂದುವರಿಸುವಂತೆ, ತಮಿಳುನಾಡಿಗೆ ಅದರ ಪಾಲಿನ ನೀರು ಸಿಗುವಂತೆ ಹಾಗೂ ಯೋಜನೆ ಅನುಮೋದನೆಗಾಗಿ ಕೇಂದ್ರ ಜಲ ಆಯೋಗಕ್ಕೆ ಅಧಿಕಾರ ನೀಡುವಂತೆ ಆದೇಶಿಸಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ವಕೀಲ ಶ್ಯಾಮ್ ದಿವಾನ್ ಅವರನ್ನು ಸೋಮವಾರ ಬೆಳಗ್ಗೆ ಭೇಟಿಯಾದ್ದಾಗಿ ಅವರು ತಿಳಿಸಿದರು. ಕೃಷ್ಣಾ ಮತ್ತು ಮಹದಾಯಿ ಯೋಜನೆಗಳ ವಿಷಯದಲ್ಲೂ ಮಾತುಕತೆ ನಡೆದಿವೆ. ನಾಳೆ ಕಾವೇರಿ ನೀರಾವರಿ ನಿಗಮ ಸಭೆ ಇದೆ. ಯೋಜನೆ ಅನ್ನು ಹೇಗೆ ಮಂಡಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಈ ವಿಷಯದಲ್ಲಿ ಇನ್ನೂ ಸಮಯ ವ್ಯರ್ಥ ಮಾಡಲಾಗದು. ಸಿಎಂ ಕೂಡ ಈಗಾಗಲೇ ಪ್ರಧಾನಿಯನ್ನು ಭೇಟಿ ಮಾಡಿ ಇದನ್ನು ಚರ್ಚಿಸಿದ್ದಾರೆ ಎಂದರು.

ಈ ಯೋಜನೆಗಾಗಿ ನಮ್ಮ ನೀರು ನಮ್ಮ ಹಕ್ಕು ಎಂದು ನೂರಾರು ಕಿಲೋಮೀಟರ್ ನಡೆದು ಹೋರಾಟ ಮಾಡಿದ್ದೇವೆ. ಅನೇಕ ಪ್ರಕರಣಗಳನ್ನು ಎದುರಿಸಿದ್ದೇವೆ. ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಮತ್ತು ಬೆಂಗಳೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರು ಒದಗಿಸುವುದು ನಮ್ಮ ಗುರಿ. ಈಗ ಆ ಶ್ರಮ ಫಲಿಸುತ್ತಿದೆ. ವಕೀಲರು ಹಾಗೂ ಕಾನೂನು ತಜ್ಞರ ಜತೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದೇವೆ. ಕಪಿಲ್ ಸಿಬಲ್ ಅವರ ಕಾರ್ಯಕ್ರಮದಲ್ಲಿಯೂ ಅನೇಕ ನಿವೃತ್ತ ನ್ಯಾಯಾಧೀಶರನ್ನು ಭೇಟಿಯಾಗಿ ಮಾತನಾಡಿದ್ದೇನೆ ಎಂದರು.

ಸಚಿವರಾಗಲು ಕೆಲವು ಶಾಸಕರು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅದರಲ್ಲೇನು ತಪ್ಪು? ಶಾಸಕರಿಗೂ ಮತ್ತು ವಿಧಾನ ಪರಿಷತ್ ಸದಸ್ಯರಿಗೂ ಸಚಿವರಾಗುವ ಹಕ್ಕಿದೆ. ಅವರನ್ನು ಸಂಪುಟಕ್ಕೆ ಸೇರಿಸುವುದು ಸಿಎಂ ಅವರ ಅಧಿಕಾರ. ಅವರು ಪಕ್ಷಕ್ಕಾಗಿ ಶ್ರಮಿಸಿದ್ದಾರೆ, ತ್ಯಾಗ ಮಾಡಿದ್ದಾರೆ. ಹೀಗಾಗಿ ಅಧಿಕಾರಕ್ಕೆ ಆಶೆ ಪಡುವುದು ಸಹಜ. ಅದನ್ನು ತಪ್ಪು ಎಂದು ಹೇಳಲಾಗದು ಎಂದರು. ಸಚಿವ ಸಂಪುಟ ಪುನರ್‌ರಚನೆ ಅಥವಾ ನಾಯಕತ್ವ ಬದಲಾವಣೆ ಬಗ್ಗೆ ಕೇಳಿದಾಗ ಅವರು ನಗುಮುಖದಿಂದ, ಅದನ್ನು ಗಿಣಿ ಶಾಸ್ತ್ರ ಹೇಳುವವರ ಬಳಿ ಹೋಗಿ ಕೇಳಿ ಎಂದು ಹೇಳಿ ವಿಷಯ ಮುಕ್ತಾಯಗೊಳಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss