Tuesday, November 18, 2025

Latest Posts

ಆಪರೇಷನ್ ಗಜರಾಜ ಸಕ್ಸಸ್​ : ಅರವಳಿಕೆ–ಕ್ರೇನ್ ರೆಸ್ಕ್ಯೂ ಯಶಸ್ವಿ

- Advertisement -

ಅಂತೂ… ಶಿವನಸಮುದ್ರದ ಬಳಿ ಕೆನಾಲ್‌ನಲ್ಲಿ ಬಿದ್ದಿದ್ದ ಕಾಡಾನೆ ರೋಚಕವಾಗಿ ರಕ್ಷಿಸಲ್ಪಟ್ಟಿದೆ. ನಾಲ್ಕು ದಿನಗಳಿಂದ 20 ಅಡಿ ಆಳದ ನೀರಿನಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ಅರವಳಿಕೆ ಮದ್ದು ನೀಡಿ, ಹೈಡ್ರಾಲಿಕ್ ಕ್ರೇನ್ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಗಿದೆ. ಈಗ ಆನೆಯನ್ನು ಸ್ಥಳೀಯ ಕಾಡಿಗೆ ಕೊಂಡೊಯ್ಯಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಬರುವ ನಿರೀಕ್ಷೆಯಿದೆ. ನೀರಿನಲ್ಲಿ ಮೂರು ದಿನ ಕಳೆಯುವಂತಾಗಿದ್ದುದರಿಂದ, ವೈದ್ಯರು ಪ್ರಥಮ ಚಿಕಿತ್ಸೆ ನೀಡುವ ಕಾರ್ಯ ಆರಂಭಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿ ಇರುವ ಖಾಸಗಿ ವಿದ್ಯುತ್ ಘಟಕದ ಕಾಲುವೆಗೆ ಬಿದ್ದಿದ್ದ ಈ ಆನೆ, ಕಳೆದ ನಾಲ್ಕು ದಿನಗಳಿಂದ ನೀರಿನಲ್ಲಿ ಸಿಲುಕಿಕೊಂಡು ಹತಾಶೆಯಾಗಿತ್ತು. ಅರಣ್ಯ ಇಲಾಖೆ, ಪಶುವೈದ್ಯರು ಹಾಗೂ ರಕ್ಷಣಾ ಸಿಬ್ಬಂದಿ ನಡೆಸಿದ ತೀವ್ರ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ.

ವೈದ್ಯರಾದ ಡಾ. ರಮೇಶ್ ಮತ್ತು ಡಾ. ಆದರ್ಶ್ ನೀಡಿದ ಅರವಳಿಕೆ ಮದ್ದಿನ ನಂತರ, ಹೈಡ್ರಾಲಿಕ್ ಕ್ರೇನ್ ಮೂಲಕ ನಳೆಗೆ ಕಂಟೇನರ್ ಇಳಿಸಿ ಆನೆಯನ್ನು ಮೇಲಕ್ಕೆ ತರುವ ಕಾರ್ಯ ಸುಗಮಗೊಳಿಸಲಾಯಿತು. ಆನೆ ಕಂಟೇನರ್‌ ಬಳಿ ಬರಲು ಪಟಾಕಿ ಸಿಡಿಸುವಂತಹ ಕ್ರಮಗಳನ್ನೂ ತಂಡ ಕೈಗೊಂಡಿತ್ತು. ಆನೆ ಸುರಕ್ಷಿತವಾಗಿ ಮೇಲಕ್ಕೆ ಬಂದ ನಂತರ, ಅರಣ್ಯ ಅಧಿಕಾರಿಗಳು ಅದನ್ನು ಸಮೀಪದ ಕಾಡಿಗೆ ಹಿಂತಿರುಗಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ಆನೆ ತನ್ನ ಸಹಜ ವಾಸಸ್ಥಳಕ್ಕೆ ಮರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸಿಎಫ್ ರಘು, ಮೈಸೂರು ವನ್ಯಜೀವಿ ವಲಯದ ಡಿಸಿಎಫ್ ಪ್ರಭು ಹಾಗೂ ತಹಶೀಲ್ದಾರ್ ಲೋಕೇಶ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸಂಪೂರ್ಣ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಆರಂಭಿಕ ಅರವಳಿಕೆ ಮದ್ದು ಪರಿಣಾಮಕಾರಿಯಾಗದ ಹಿನ್ನೆಲೆಯಲ್ಲಿ ಮತ್ತೊಂದು ಡೋಸ್ ನೀಡಲಾಯಿತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಶ್ರಮಿಸಿದ ಪರಿಣಾಮ, ಈ ರಕ್ಷಣಾ ಕಾರ್ಯಾಚರಣೆ ಅಪಾಯವಿಲ್ಲದೆ ಯಶಸ್ವಿಯಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss