K.R. ನಗರ ಕಾಂಗ್ರೆಸ್ ಶಾಸಕ ಡಿ. ರವಿಶಂಕರ್ ಅವರು ತಮ್ಮ ಸ್ವಂತ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿರುವ ಘಟನೆ ಜಿಲ್ಲೆಯಲ್ಲೇ ಚರ್ಚೆಗೆ ಕಾರಣವಾಗಿದೆ. ವೇದಿಕೆ ಮೇಲೆಯೇ ಶಾಸಕರು ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮಹದೇವ್ ಅವರು ಗ್ರಾಮಕ್ಕೆ ಡೈರಿ ಕಟ್ಟಡ ನಿರ್ಮಾಣಕ್ಕೆ ಮನವಿ ಮಾಡಲು ವೇದಿಕೆ ಮೇಲೇರಿದ್ದರು. ಈ ಸಮಯದಲ್ಲಿ ಅಚನಾಕವಾಗಿ ಗೊಂದಲ ಉಂಟಾಗಿ, ಶಾಸಕ ರವಿಶಂಕರ್ ಸಾರ್ವಜನಿಕರ ಎದುರೇ ಕೋಪಗೊಂಡು ಕಾರ್ಯಕರ್ತನಿಗೆ ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ಆದರೆ ಇದೀಗ, ಹೊಡೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದ ಮಹದೇವ್ ಅವರೇ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ. ಆ ದಿನ ಸಭೆಯಲ್ಲಿ ನಾನು ಡೈರಿ ಸಮಸ್ಯೆ ಹೇಳುತ್ತಿದ್ದೆ. ಹಲವರು ಒಂದೇ ವೇಳೆ ಬೇರೆ ಬೇರೆ ವಿಷಯಗಳನ್ನು ಹೇಳುತ್ತಿದ್ದರು. ಗೊಂದಲ ಹೆಚ್ಚಾಗಿ ಶಾಸಕರಿಗೂ ಕೇಳಿಸಿಕೊಳ್ಳಲು ಆಗಲಿಲ್ಲ. ನಾನು ಅವರ ಪಕ್ಕದಲ್ಲಿ ನಿಂತಿದ್ದಾಗ ಅವರು ಬೆನ್ನು ತಟ್ಟಿ ‘ಕೇಳ್ತೀವಿ, ಕುಳಿತುಕೊಳ್ಳಿ’ ಎಂದು ಮಾತ್ರ ಹೇಳಿದ್ದಾರೆ. ಯಾವುದೇ ಹಲ್ಲೆ ಮಾಡಿಲ್ಲ. ವೈರಲ್ ಆಗಿರುವ ಆರೋಪಗಳು ಸತ್ಯದಿಂದ ದೂರ ಎಂದು ಹೇಳಿದ್ದಾರೆ. ಮಹದೇವ್ ಅವರ ಈ ಸ್ಪಷ್ಟನೆಯ ನಂತರ, ವೈರಲ್ ಆಗಿದ್ದ ಶಾಸಕ ಹಲ್ಲೆ ಆರೋಪದ ಮೇಲೆ ಹೊಸ ಚರ್ಚೆ ಶುರುವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

