ದೃಶ್ಯ ಸಿನಿಮಾ ನೆನಪಿಸುವಂತೆ ಸಾಲದ ಹಣಕ್ಕಾಗಿ ತನ್ನದೇ ಸೋದರ ಸಂಬಂಧಿಯನ್ನು ಆಂಧ್ರದ ಕುಪ್ಪಂಗೆ ಕರೆಸಿ, ಮನೆಯಲ್ಲಿ ಕೊಂದು, ನೆಲ ತೋಡಿ ಹೂತು, ಮೇಲಾಗಿ ನನಗೆ ಗೊತ್ತಿಲ್ಲ ಎಂದು ನಾಟಕವಾಡಿದ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಂಜಿನಿಯರ್‌ೊಬ್ಬರ ನಾಪತ್ತೆ ಪ್ರಕರಣ, ನಿಧಾನವಾಗಿ ಪೊಲೀಸರ ತೀವ್ರ ತನಿಖೆಯಿಂದ ಕ್ರೂರ ಕೊಲೆಕೇಸಾಗಿ ಮಾರ್ಪಟ್ಟಿದೆ.
ಮೃತರಾದವರು 30 ವರ್ಷದ ಶ್ರೀನಾಥ್. ಆಂಧ್ರದ ಕುಪ್ಪಂ ಮೂಲದವರು ಹಾಗೂ ಅತ್ತಿಬೆಲೆ ಸಮೀಪದ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ವಾಸವಾಗಿದ್ದರು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಶ್ರೀನಾಥ್ ಉತ್ತಮ ಸಂಬಳ ಪಡೆದು ಜೀವನ ಸಾಗಿಸುತ್ತಿದ್ದರು. ಈ ನಡುವೆ, ಅವರ ದೊಡ್ಡಪ್ಪನ ಮಗನಾದ ಪ್ರಭಾಕರ್ ಹಣ ಡಬಲ್ ಮಾಡಿಕೊಡುತ್ತೇನೆ ಎಂದು ಹೇಳಿ ಶ್ರೀನಾಥ್ ಅವರಿಂದ 40 ಲಕ್ಷ ರೂ. ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.
ಇತ್ತೀಚೆಗೆ ಶ್ರೀನಾಥ್ ಹಣವನ್ನು ವಾಪಸ್ ಕೇಳುತ್ತಿದ್ದಂತೆ, ಪ್ರಭಾಕರ್ ತನ್ನ ಸ್ನೇಹಿತ ಜಗದೀಶ್ ಜೊತೆಗೆ ಕೊಲೆ ಯೋಚನೆ ರೂಪಿಸಿದ್ದಾನೆ. “ಹಣ ಕೊಡ್ತೀನಿ, ಕುಪ್ಪಂಗೆ ಬಾ” ಎಂದು ಕರೆಸಿ ಬಲೆಗೆ ಸೆಳೆದಿದ್ದಾರೆ. ಶ್ರೀನಾಥ್ ಮನೆಗೆ ಬಂದ ಕ್ಷಣದಲ್ಲೇ ಜಗಳ ಹಾಕಿ, ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದರೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ನಡೆದ ನಂತರ ಅದೇ ಮನೆಯಲ್ಲಿ ಗುಂಡಿ ತೆಗೆದು, ಮೃತದೇಹವನ್ನು ಹೂತು ಹಾಕಿ ಮೇಲಿನಿಂದ ಮಣ್ಣು ಸುರಿದು ನಾಪತ್ತೆ ಮಾಡುವ ಪ್ರಯತ್ನ ಮಾಡಿದ್ದಾರೆ. ನಂತರ ಪ್ರಭಾಕರ್ “ನನಗೆ ಏನೂ ಗೊತ್ತಿಲ್ಲ” ಎಂದು ನಾಟಕವಾಡಿದ್ದಾನೆ. ಶ್ರೀನಾಥ್ ಪತ್ನಿ ಹಲವು ಬಾರಿ ವಿಚಾರಿಸಿದರೂ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಗಂಡ ಮನೆಗೆ ಎರಡು ದಿನವೂ ಮರಳದ ಕಾರಣ, ಪತ್ನಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು. ಪೊಲೀಸರು ಪ್ರಭಾಕರ್ ಮತ್ತು ಜಗದೀಶ್‌ರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗಲೇ ಸಂಪೂರ್ಣ ಕೊಲೆ ರಹಸ್ಯ ಹೊರಬಂದಿದೆ.
ಹಂತಕರ ಮಾಹಿತಿ ಆಧರಿಸಿ ಕುಪ್ಪಂ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ಮನೆಯಲ್ಲಿ ಹೂತಿಟ್ಟಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ. ಇಬ್ಬರು ಆರೋಪಿ ಬಂಧಿತರಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಇವರಿಬ್ಬರ ಕ್ರೈಂ ಹಿಸ್ಟರಿ ಇನ್ನಷ್ಟು ಬೆಚ್ಚಿಬೀಳಿಸುವಂತಿದೆ. ಹಿಂದೆ ಹಣಕ್ಕಾಗಿ ಸ್ನೇಹಿತರ ಪತ್ನಿಯನ್ನು ಕೊಂದು ಜೈಲು ಸೇರಿದ್ದ ಪ್ರಭಾಕರ್, ತನ್ನ ಪ್ರೇಯಸಿಯನ್ನು ಕೊಂದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಜಗದೀಶ್ — ಇತ್ತೀಚೆಗೆ ಇಬ್ಬರೂ ಜೈಲಿನಿಂದ ಹೊರಬಂದಿದ್ದರು. ಇದೀಗ ಹಣಕ್ಕಾಗಿ ಸೇರಿ ಮತ್ತೊಂದು ಕೊಲೆಯನ್ನೇ ನೆರವೇರಿಸಿದ್ದಾರೆ.
ಪ್ರಭಾಕರ್ ರೂಪಿಸಿದ್ದ ಮಾಸ್ಟರ್ ಪ್ಲಾನ್ ಇನ್ನಷ್ಟು ಶಾಕ್ ನೀಡುತ್ತದೆ. ಶ್ರೀನಾಥ್ ಹಣ ಕೇಳಿದಾಗ “ಐಟಿ ಪ್ರಾಬ್ಲಮ್… ಫೋನ್ ಅಥವಾ ಮೆಸೇಜ್ ಬೇಡ… ವಾಟ್ಸಾಪ್ ಸ್ಟೇಟಸ್‌ನಲ್ಲಿ ಮಾತನಾಡೋಣ” ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಂಬಿದ ಶ್ರೀನಾಥ್ ಸ್ಟೇಟಸ್ ಮೂಲಕ ಸಂದೇಶ ಹಂಚಿಕೊಂಡಿದ್ದು, ಕುಪ್ಪಂಗೆ ಬರುವಾಗ ಮೊಬೈಲ್ ಮನೆಯಲ್ಲೇ ಇಟ್ಟು ಬಂದಿದ್ದರು. ಈ ಕಾರಣಕ್ಕೆ ಶ್ರೀನಾಥ್‌ನ ಚಲನವಲನವನ್ನು ಟ್ರೇಸ್ ಮಾಡಲು ಪೊಲೀಸರಿಗೆ ಕಷ್ಟವಾಯಿತು. ಒಂದು ತಿಂಗಳ ಕಾಲ್ ಡಿಟೇಲ್ಸ್ ಪರಿಶೀಲನೆ ಫಲ ಕೊಡದಾಗ, ಪೊಲೀಸರು ಎರಡು ತಿಂಗಳ ಡೇಟಾವನ್ನು ಚೆಕ್ ಮಾಡಿದಾಗ ಜಗದೀಶ್ ಸಂಪರ್ಕ ಪತ್ತೆಯಾಯಿತು. ವಿಚಾರಣೆ ವೇಳೆ ಇಬ್ಬರೂ ಕೊನೆಗೆ ನಿಜ ಬಾಯ್ಬಿಟ್ಟಿದ್ದಾರೆ. ಪೊಲೀಸರ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

