ಕಳೆದ ವಾರ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರ ದಂಡೇ ಹರಿದು ಬಂತು. ನವೆಂಬರ್ 14ರಿಂದ 19ರವರೆಗೆ ಲಕ್ಷಾಂತರ ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ದಿನವಾರು ವಿವರ ನೋಡಿದರೆ — 14ರಂದು 66,709 ಜನ ಭಕ್ತರು ಆಗಮಿಸಿರ್ತಾರೆ, 15ರಂದು 73,852, 16ರಂದು 75,004, 17ರಂದು 71,208, 18ರಂದು 66,966 ಮತ್ತು 19ರಂದು 67,121 ಮಂದಿ ದರ್ಶನ ಪಡೆದಿದ್ದಾರೆ. ಪ್ರತಿದಿನವೂ ಜನಸಂದಣಿ ಹೆಚ್ಚಾಗುತ್ತಲೇ ಇದ್ದು, ದೇವರ ದರ್ಶನ ಪಡೆಯಲು ಭಕ್ತರು ಗಂಟೆಗಳಷ್ಟು ಸಾಲಿನಲ್ಲಿ ನಿಂತು ಭಕ್ತಿ ಭಾವದಿಂದ ನಿರೀಕ್ಷಿಸಿದ್ದರು.
ಈ ಆರು ದಿನಗಳಲ್ಲಿ ದೇವಾಲಯದ ಹುಂಡಿಗೆ ಕೋಟ್ಯಂತರ ರೂಪಾಯಿಗಳ ಕಾಣಿಕೆ ಹರಿದು ಬಂದಿದೆ. 14ರಂದು 4.03 ಕೋಟಿ, 15ರಂದು 3.16 ಕೋಟಿ, 16ರಂದು 3.98 ಕೋಟಿ, 17ರಂದು 3.84 ಕೋಟಿ, 18ರಂದು 3.84 ಕೋಟಿ ಮತ್ತು 19ರಂದು 4.75 ಕೋಟಿಗಳಷ್ಟು ಹಣ ಸಂಗ್ರಹವಾಗಿದೆ. ಭಕ್ತರು 10 ರೂಪಾಯಿಯಿಂದ ಹಿಡಿದು ದೊಡ್ಡ ಮಟ್ಟದ ದೇಣಿಗೆಗಳನ್ನು ಅರ್ಪಿಸುತ್ತಾ ವೆಂಕಟೇಶ್ವರನಿಗೆ ತಮ್ಮ ಭಕ್ತಿಭಾವವನ್ನು ತೋರಿಸಿದ್ದಾರೆ. ‘ಭೂವೈಕುಂಠ’ವೆಂದು ಕರೆಯಲಾಗುವ ತಿರುಮಲ ದೇವಾಲಯಕ್ಕೆ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿರುವುದು ಇದೇ ಕಾರಣ.
ನವೆಂಬರ್ 18ರಂದು ದೇಶದ ಪ್ರಸಿದ್ಧ ಉದ್ಯಮಿಯಾಗಿರುವ HCL ಟೆಕ್ನಾಲಜೀಸ್ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ರೋಶನಿ ನಾಡಾರ್ ಅವರು ಟಿಟಿಡಿ ಬಿಐಆರ್‌ಡಿ ಟ್ರಸ್ಟ್‌ಗೆ ಭಾರೀ 2 ಕೋಟಿ ರೂ. ದೇಣಿಗೆಯನ್ನು ಅರ್ಪಿಸಿದ್ದಾರೆ. ರಂಗನಾಯಕುಲ ಮಂಟಪದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ಸಮ್ಮುಖದಲ್ಲಿ ದೇಣಿಗೆಯ ಡಿಡಿಯನ್ನು ನೀಡಲಾಯಿತು. ತಿರುಪತಿ ದೇವಾಲಯಕ್ಕೆ ಪ್ರತಿವರ್ಷ ಗಣ್ಯರು, ಉದ್ಯಮಿ, ಸಿನಿತಾರೆಯರು ದೇಣಿಗೆ ನೀಡುವುದು ರೂಢಿಯಾಗಿದೆ. ಆದರೆ, ಈ ಬಾರಿ ರೋಶನಿ ನಾಡಾರ್ ಅವರ 2 ಕೋಟಿ ಕಾಣಿಕೆ ವಿಶೇಷ ಗಮನ ಸೆಳೆದಿದೆ.
ಕಡಪ ಜಿಲ್ಲೆಯ ಸಿ.ಆರ್. ಅಸೋಸಿಯೇಟ್ಸ್ ಮಾಲೀಕರಾದ ಶ್ರೀ ಚರಣ್ ತೇಜ್ ಅವರು ಕೂಡ ದೇಣಿಗೆಯಲ್ಲಿ ಕೈ ಜೋಡಿಸಿ, ಟಿಟಿಡಿ ನಡೆಸುವ ಎಸ್‌ವಿ ಅನ್ನ ಪ್ರಸಾದ ಟ್ರಸ್ಟ್‌ಗೆ 10,10,116 ರೂ. ನೀಡಿದ್ದಾರೆ. ಭಕ್ತರೂ, ಉದ್ಯಮಿಗಳೂ, ದಾನಶೂರರೂ ತಿರುಪತಿ ದೇವಸ್ಥಾನದ ವಿವಿಧ ಟ್ರಸ್ಟ್‌ಗಳಿಗೆ ನೀಡುವ ಕಾಣಿಕೆಗಳು ಲಕ್ಷಾಂತರ ಯಾತ್ರಾರ್ಥಿಗಳಿಗೆ ಅನ್ನಸಂತರ್ಪಣೆ, ಸೇವಾ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಲು ಮಹತ್ತರ ಸಹಕಾರ ನೀಡುತ್ತಿವೆ…
ವರದಿ : ಗಾಯತ್ರಿ ಗುಬ್ಬಿ

