ಬೆಂಗಳೂರು: ಹಾಡಹಗಲೇ ಆರ್‌ಬಿಐ ಅಧಿಕಾರಿಗಳ ವೇಷದಲ್ಲಿ ಬಂದು ₹7 ಕೋಟಿ 11 ಲಕ್ಷ ದರೋಡೆ ಮಾಡಿದ ಗ್ಯಾಂಗ್, ಕದ್ದ ಹಣದಲ್ಲಿ ಕೇವಲ ₹1 ಲಕ್ಷ ಮಾತ್ರ ಬಳಸಿದ್ದರೆಂಬ ಸಂಗತಿ ಪೊಲೀಸರ ತನಿಖೆಯಿಂದ ಹೊರಬಂದಿದೆ. ವಿಚಾರಣೆಯ ವೇಳೆ ಆರೋಪಿಗಳ ಹಣ ಬಳಕೆಯ ವಿವರಗಳು ಬಹಿರಂಗವಾಗಿವೆ.
ಪೊಲೀಸರ ಪ್ರಕಾರ, ಆರೋಪಿಗಳು ಎರಡು ಚೀಲಗಳಲ್ಲಿ ದೋಚಿದ ಹಣದಿಂದ ₹1 ಲಕ್ಷ ತೆಗೆದುಕೊಂಡು, ₹40 ಸಾವಿರಕ್ಕೆ ಒನ್‌ಪ್ಲಸ್ ಮೊಬೈಲ್ ಹಾಗೂ ₹20 ಸಾವಿರಕ್ಕೆ ಮತ್ತೊಂದು ಫೋನ್ ಖರೀದಿಸಿದ್ದಾರೆ. ಇದೇ ಹಣದಿಂದ ಪೆಟ್ರೋಲ್, ಊಟ, ಎರಡು ದಿನ ವಾಸ್ತವ್ಯಕ್ಕಾಗಿ ಲಾಡ್ಜ್ ಬಿಲ್ ಪಾವತಿಸಿದ್ದು, ಸಹಾಯ ಮಾಡಿದವರಿಗೆ ₹5,000 ರಿಂದ ₹10,000 ವರೆಗೆ ನೀಡಿರುವುದು ತಿಳಿದುಬಂದಿದೆ.
ದೊಡ್ಡ ಮೊತ್ತದ ಹಣ ರಿಕವರಿ ಮಾಡಲು, ಪೊಲೀಸರು ಹೆಚ್‌ಡಿಎಫ್‌ಸಿ ಬ್ಯಾಂಕ್‌ಗೆ ಪತ್ರ ಬರೆದು ಕದ್ದ ನೋಟುಗಳ ಸೀರಿಯಲ್ ನಂಬರ್‌ಗಳ ಪಟ್ಟಿಯನ್ನು ಪಡೆದುಕೊಂಡಿದ್ದಾರೆ. ಕಣ್ಮರೆಯಾದ ಸೀರಿಯಲ್ ನಂಬರ್‌ಗಳ ಆಧಾರದ ಮೇಲೆ ರಿಕವರಿ ಕಾರ್ಯಾಚರಣೆ ಮುಂದುವರಿಯಲಿದೆ.
ಇತ್ತ, ರಾಜಾಜಿನಗರದಲ್ಲಿ ಬುಧವಾರ ನಡೆದ ದರೋಡೆ ಘಟನೆಯ ನಂತರ ಸಿಎಂಎಸ್ ಕಂಪನಿ ಸಂಪೂರ್ಣ ಅಲರ್ಟ್ ಮೋಡ್‌ಗೆ ಹೋಗಿದೆ. ಎಟಿಎಂ ಘಟಕಗಳಿಗೆ ಹಣ ಸಾಗಿಸುವ ವಾಹನಗಳಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗುತ್ತಿದೆ. ಇಬ್ಬರು ಕಸ್ಟೋಡಿಯನ್, ಗನ್‌ಮ್ಯಾನ್ ಮತ್ತು ಚಾಲಕರೊಂದಿಗೆ ಹಣ ಸಾಗಾಟ ನಡೆಯುತ್ತಿದ್ದು, ವಾಹನಗಳ ಮುಂದೆ–ಹಿಂದೆ ಕ್ಯಾಮೆರಾ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ.
ಸಿಎಂಎಸ್ ಕಂಪನಿಯು ಬೆಂಗಳೂರಿನಲ್ಲಿ ಮೂರು ಸಬ್‌ಬ್ರಾಂಚ್‌ಗಳನ್ನು ಹೊಂದಿದ್ದು, ಎಲ್ಲಾ ವಿಭಾಗಗಳಲ್ಲಿ ಕಠಿಣ ಭದ್ರತಾ ಕ್ರಮ ಜಾರಿಗೆ ಬಂದಿದೆ. ಆದರೆ ಕೆಲ ಕಡೆಗಳಲ್ಲಿ ಗನ್‌ಮ್ಯಾನ್ ಅಥವಾ ಕಸ್ಟೋಡಿಯನ್ ಇಲ್ಲದೆ ಹಣ ಸಾಗಾಟ ನಡೆದಿದೆ ಎಂಬ ಆರೋಪ ಕಂಪನಿ ಸಿಬ್ಬಂದಿಯಿಂದಲೇ ಕೇಳಿಬಂದಿದೆ. ದರೋಡೆಯ ನಂತರ ಹಣ ಸಾಗಾಟ ಸಿಬ್ಬಂದಿ ಹೆಚ್ಚುವರಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

