ಬೆಂಗಳೂರು ಮಕ್ಕಳಿಗೆ ಅತಿ ಅಪಾಯ : ಅಪರಾಧ ಪ್ರಮಾಣ 8 ಪಟ್ಟು ಹೆಚ್ಚು

ಬೆಂಗಳೂರು ನಗರ ಜಿಲ್ಲೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ ಎಂಬುದನ್ನು ಕರ್ನಾಟಕ ಮಕ್ಕಳ ಹಕ್ಕುಗಳ ಸೂಚ್ಯಂಕ ವರದಿ ಬಹಿರಂಗಪಡಿಸಿದೆ. ಜೀವನಕ್ಕೆ ಅನುಕೂಲಕರ ಪರಿಸ್ಥಿತಿ, ಪೋಷಣೆಯ ಹಕ್ಕು, ರಕ್ಷಣೆ, ಶಿಕ್ಷಣ ಮತ್ತು ಭಾಗವಹಿಸುವ ಹಕ್ಕುಗಳ ಆಧಾರದ ಮೇಲೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ವರದಿಯನ್ನು ಸಿದ್ಧಪಡಿಸಿದೆ.

ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಿಗಿಂತ ಬೆಂಗಳೂರು ಕೊನೆ ಸ್ಥಾನ ಪಡೆದಿದ್ದು, ಕೊಲಾರ, ವಿಜಯಪುರ, ಗದಗ ಮತ್ತು ಬೆಳಗಾವಿ ಕೂಡ ದುರ್ಬಲ ಪಟ್ಟಿಯಲ್ಲಿ ಸೇರಿವೆ. ಅದರ ವಿರುದ್ಧವಾಗಿ ಕೊಡಗು ಮತ್ತು ಉಡುಪಿ ಜಿಲ್ಲೆಗಳು ಮಕ್ಕಳಿಗೆ ಸುರಕ್ಷಿತ ಮತ್ತು ಉತ್ತಮ ಪರಿಸ್ಥಿತಿಯ ಜಿಲ್ಲೆಗಳಾಗಿ ಗುರುತಿಸಲ್ಪಟ್ಟಿವೆ.

ಮಕ್ಕಳ ಮೇಲಿನ ಅಪರಾಧಗಳಲ್ಲಿ ಕೂಡ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದ್ದು, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳೂ ಈ ಪಟ್ಟಿಯಲ್ಲಿ ಸೇರಿವೆ. ಬೆಂಗಳೂರಿನಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಮಾಣ ಇತರ ಜಿಲ್ಲೆಗಳಿಗಿಂತ ಎಂಟು ಪಟ್ಟು ಹೆಚ್ಚು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದೊಂದಿಗೆ ISECನ ಎಸ್. ಮಾದೇಶ್ವರನ್ ಮತ್ತು ಬಿ.ಪಿ. ವಾಣಿ ಈ ಅಧ್ಯಯನ ನಡೆಸಿದ್ದು, ಹಲವು ಪ್ರಮುಖ ಅಂಕಿಅಂಶಗಳನ್ನು ವರದಿಯಲ್ಲಿ ನೀಡಲಾಗಿದೆ. 2021ರ ರಾಷ್ಟ್ರ ಮಟ್ಟದ ಮಕ್ಕಳ ಹಕ್ಕುಗಳ ಸೂಚ್ಯಂಕದಲ್ಲಿ ಕರ್ನಾಟಕ 10ನೇ ಸ್ಥಾನ ಪಡೆದಿತ್ತು. ಕೇರಳ, ದೆಹಲಿ, ತಮಿಳುನಾಡು, ಗೋವಾ ಮತ್ತು ಸಿಕ್ಕಿಂ ಮೊದಲ ಸ್ಥಾನಗಳಲ್ಲಿ ಇದ್ದವು. ಹೀಗಾಗಿ ಈಗಿನ ವರದಿ ಕರ್ನಾಟಕಕ್ಕೂ, ವಿಶೇಷವಾಗಿ ಬೆಂಗಳೂರಿಗೂ ಎಚ್ಚರಿಕೆಯ ಸಂಕೇತ ಎನ್ನಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author