Wednesday, November 26, 2025

Latest Posts

ರಾಮ ಪ್ರಾಣಪ್ರತಿಷ್ಠೆಯ ನಂತರ ಅಯೋಧ್ಯೆಯಲ್ಲಿ ಮತ್ತೊಂದು ಐತಿಹಾಸಿಕ ಘಟನೆ: ಮೋದಿಯಿಂದ ಕೇಸರಿ ಧ್ವಜಾರೋಹಣ!

- Advertisement -

ಅಯೋಧ್ಯೆ : ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಸಂಪೂರ್ಣಗೊಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಅಯೋಧ್ಯೆಗೆ ಆಗಮಿಸಿ ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಹಾರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ.

ಮಂಗಳವಾರ ಬೆಳಿಗ್ಗೆ 11:58ರಿಂದ ಮಧ್ಯಾಹ್ನ 1 ಗಂಟೆ ನಡುವೆ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಲಿದೆ. ಮಾರ್ಗಶಿರ ಶುಕ್ಲ ಪಂಚಮಿ, ಶ್ರೀರಾಮ–ಸೀತೆಯರ ವಿವಾಹ ದಿನವಾಗಿದ್ದು, ಸಿಖ್ ಗುರು ತೇಗಬಹದ್ದೂರರ ಬಲಿದಾನ ದಿನವೂ ಇದೇ ಸಂದರ್ಭದಲ್ಲಿ ಬಂದಿರುವುದರಿಂದ ಈ ಮಹತ್ವದ ಕಾರ್ಯಕ್ರಮ ಆಯ್ಕೆ ಮಾಡಲಾಗಿದೆ ಎಂದು PMO ತಿಳಿಸಿದೆ.

ಭಗವಾಧ್ವಜ ಅಥವಾ ಧರ್ಮಧ್ವಜದ ವಿಶೇಷತೆ ಏನು ಅನ್ನೋದನ್ನ ನೋಡೋದಾದ್ರೆ ಶಿಖರದ ಮೇಲೆ ಸ್ಥಾಪಿಸಲಾದ 42 ಅಡಿ ಎತ್ತರದ ಧ್ವಜಸ್ತಂಭವನ್ನು 360 ಡಿಗ್ರಿ ತಿರುಗುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾಕೃತಿಯಲ್ಲಿದೆ. 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ.

ಇದರ ಮೇಲೆ ಸೂರ್ಯ, ಓಂ ಹಾಗೂ ಕೋವಿದಾರ ಮರವನ್ನು ಚಿತ್ರಿಸಲಾಗಿದೆ. ಸೂರ್ಯನ ಚಿತ್ರ ರಾಮನ ವಂಶವಾದ ಸೂರ್ಯವಂಶವನ್ನು ಸೂಚಿಸುತ್ತದೆ. ಓಂ ಶುಭಸೂಚಕವಾಗಿದ್ದು, ಕೋವಿದಾರ ಮರವು ಅಯೋಧ್ಯೆಯ ಪ್ರಾಚೀನ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ.

ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ, ದಶಕಗಳ ಕಾನೂನು ಹೋರಾಟದ ಬಳಿಕ 2019ರ ನ.9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ವಿವಾದಿತ 2.77 ಎಕರೆ ಜಮೀನು ಶ್ರೀರಾಮನಿಗೆ ಸೇರಿದೆ ಎಂದು ಘೋಷಿಸಿ, ಅಲ್ಲೇ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತು. 2024ರ ಜ.22ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಿತು. ಈಗ ಇಡೀ ಮಂದಿರದ ಕಾಮಗಾರಿ ಪೂರ್ಣಗೊಂಡಂತಾಗಿದೆ.

ಅಯೋಧ್ಯೆ ಭೇಟಿ ವೇಳೆ ಇದರ ಜೊತೆಗೆ ಪ್ರಧಾನಿ ಮೋದಿಯವರು ಶೇಷಾವತಾರ ಮಂದಿರ, ಸಪ್ತಮಂದಿರ, ಮಾತಾ ಅನ್ನಪೂರ್ಣ ಮಂದಿರಗಳಿಗೆ ತೆರಳಿ ದರ್ಶನ ಪಡೆಯಲಿದ್ದಾರೆ. ಬಾಲರಾಮನ ದರ್ಶನ ಪಡೆದ ಬಳಿಕ ರಾಮದರ್ಬಾರ್‌ನಲ್ಲಿ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ಧ್ವಜಾರೋಹಣ ನೆರವೇರಿಸಿದ ನಂತರ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss