ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಅಧಿಕಾರಿಗಳ ಸೋಗಿನಲ್ಲಿ ತಡೆದು ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ, ಪೊಲೀಸರು ಇನ್ನೂ 47 ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7.01 ಕೋಟಿ ರೂಪಾಯಿ ಹಣವನ್ನು ಪೊಲೀಸರು ಈಗಾಗಲೇ ರಿಕವರ್ ಮಾಡಿದ್ದಾರೆ. ಉಳಿದ 10 ಲಕ್ಷ ರೂಪಾಯಿ ಬಗ್ಗೆ ತನಿಖೆ ಮುಂದುವರಿದಿದ್ದು, ಬಂಧಿತರಾದ 9 ಮಂದಿಯ ವಿಚಾರಣೆ ತೀವ್ರಗೊಂಡಿದೆ.
ಪ್ರಕರಣದ ಪ್ರಮುಖ ಆರೋಪಿ ನವೀನ್ ಅನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಹೈದರಾಬಾದ್‌ನ ಲಾಡ್ಜ್ ಒಂದರಲ್ಲಿ 53 ಲಕ್ಷ ರೂಪಾಯಿ ಹಣದೊಂದಿಗೆ ಆತ ಸಿಕ್ಕಿಬಿದ್ದಿದ್ದಾನೆ. ಎರಡು ದಿನಗಳ ಕಾಲ ನಡೆದ ವಿಚಾರಣೆ ವೇಳೆ, ನವೀನ್ ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಕುಪ್ಪಂನಲ್ಲಿ ಇರುವ ಮನೆಯೊಂದರಲ್ಲಿ 47 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಮೊದಲು, ದರೋಡೆಯ ಬೆನ್ನಟ್ಟಿದ ಪೊಲೀಸರು ಹೊಸಕೋಟೆಯ ಪಾಳುಬಿದ್ದ ಮನೆಯಲ್ಲಿ 5.56 ಕೋಟಿ ರೂಪಾಯಿಗಳನ್ನು ಪತ್ತೆ ಹಚ್ಚಿದ್ದರು. ಹಂತ ಹಂತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ತನಿಖೆಯಲ್ಲಿದ್ದ ಹಣದಿಂದ ಒಟ್ಟು 7.01 ಕೋಟಿ ರೂಪಾಯಿ ಮರುಪಡೆಯಲು ಯಶಸ್ವಿಯಾಗಿದ್ದಾರೆ. ಹಣಕಾಸಿನ ಸಂಕಷ್ಟದಿಂದ ಬಳಲುತ್ತಿದ್ದ ಆರೋಪಿಗಳು ಸಾಲ ತೀರಿಸುವ ಉದ್ದೇಶದಿಂದ ಈ ದರೋಡೆಗೆ ಮುಂದಾಗಿದ್ದರು ಎಂಬುದು ತನಿಖೆಯಲ್ಲಿ ಹೊರಬಂದಿದೆ. ಉಳಿದ ಹಣವನ್ನು ಐಷಾರಾಮಿ ಜೀವನಕ್ಕೆ ಬಳಸುವ ಕನಸು ಅವರಿಗೆ ಇದ್ದುದೂ ತಿಳಿದುಬಂದಿದೆ.
ಮುಖ್ಯ ಆರೋಪಿಗಳಾದ ಗೋಪಿ ಮತ್ತು ಜೇವಿಯರ್ ತಲಾ 17 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಜೇವಿಯರ್ ಒಂದು ವರ್ಷದ ಹಿಂದೆಯೇ ಕೆಲಸ ಬಿಟ್ಟಿದ್ದಾನೆ. ಕುಡಿತ ಮತ್ತು ಜೂಜಿನ ಚಟದಿಂದ ಹಣಕಾಸಿನ ಒತ್ತಡ ಹೆಚ್ಚಾಗಿ, ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ರೂಪಿಸಿದ ಯೋಜನೆಯ ಪ್ರಕಾರ ಹಣ ಸಾಗಿಸುತ್ತಿದ್ದ ಎಟಿಎಂ ವಾಹನ ದರೋಡೆ ಮಾಡಲಾಗಿದೆ. ಈ ತಂಡದಲ್ಲಿ ಕೆಲಸ ಮಾಡುತ್ತಿದ್ದ ಗೋಪಿಯೇ ಈ ದರೋಡೆ ಪ್ರಕರಣದ ಮುಖ್ಯ ಸೂತ್ರಧಾರ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

