ರಾಜ್ಯ ರಾಜಕೀಯದ ಚರ್ಚೆಗೆ ಹೊಸ ತಿರುವು ನೀಡುವಂತೆ, ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು ಡಿ.ಕೆ. ಶಿವಕುಮಾರ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಇಲ್ಲದಿದ್ದರೆ ಈ ಜನ್ಮದಲ್ಲಿ ಅವರಿಗೆ ಮುಖ್ಯಮಂತ್ರಿ ಪದವಿ ಸಿಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಮೈಸೂರಿನ ಹುಡ್ಕೋ ಬಡಾವಣೆಯ ನವಗ್ರಹ ಹಾಗೂ ಬಲಮುರಿ ಶಕ್ತಿ ಗಣಪತಿ ದೇವಾಲಯದಲ್ಲಿ ರಾಜ್ಯಲಕ್ಷ್ಮಿ ಪೀಠ ಪ್ರಾಪ್ತ್ಯರ್ಥ ವಿಶೇಷ ಪೂಜೆ ನೆರವೇರಿಸಿದ ನಂತರ ಗುರುಗಳು ಮಾತಾಡಿದರು. ಗಣಪತಿ ಹಾಗೂ ಲಲಿತಾ ತ್ರಿಪುರಸುಂದರಿ ದೇವಿಗೆ ಪೂಜೆ ಸಲ್ಲಿಸಿ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂಬ ಸಂಕಲ್ಪ ಮಾಡಲಾಗಿದೆ ಎಂದು ವಿವರಿಸಿದರು.
ಪೂಜೆ ವೇಳೆ ದೇವಿ ಬಲಗಡೆಯಿಂದ ಹೂ ವರ ಕೊಟ್ಟಿದ್ದಾರೆ. ಇದು ಸ್ಪಷ್ಟ ಆಶೀರ್ವಾದ. ಡಿ.ಕೆ. ಶಿವಕುಮಾರ್ ಖಂಡಿತವಾಗಿ ಮುಖ್ಯಮಂತ್ರಿ ಆಗುತ್ತಾರೆ. ಇದು ನೂರಿಗೆ ಸಾವಿರ ಪಟ್ಟು ನಿಶ್ಚಿತ” ಎಂದು ಅವರು ಜೋರಾಗಿ ಹೇಳಿದ್ದಾರೆ. ಯಾರು ಏನೇ ಮಾಡಿದರೂ ದೈವ ಸಂಕಲ್ಪದ ಮುಂದೆ ಯಾವುದೂ ನಡೆಯೋದಿಲ್ಲ ಎಂದು ಗುರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಜ್ಯೋತಿಷ್ಯದ ಬಗ್ಗೆ ಮಾತನಾಡಿದ ಅವರು, ಮಕರ ರಾಶಿಯಿಂದ ಮೂರನೇ ಭಾವವಾದ ಮೀನ ರಾಶಿಯಲ್ಲಿ ಶನೇಶ್ವರ ಇರುವುದರಿಂದ ಅವರಿಗೆ ಅಧಿಕಾರ ದಕ್ಕುವುದು ಶತಸಿದ್ಧ. ಒಂದು ವೇಳೆ ಈ ಅವಧಿಯಲ್ಲಿ ಸಿಎಂ ಆಗದಿದ್ದರೆ, ಈ ಜನ್ಮದಲ್ಲಿ ಅವ್ವಷ್ಟು ಅವಕಾಶ ಸಿಗುವುದಿಲ್ಲ ಎಂದು ಭವಿಷ್ಯ ನುಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

