ಬೆಂಗಳೂರು: ನಗರದಲ್ಲಿ ಹಾಡಹಗಲೇ ನಡೆದ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ಪ್ರಕರಣವನ್ನು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 7.01 ಕೋಟಿ ರೂಪಾಯಿ ರಿಕವರಿ ಆಗಿರುವುದಾಗಿ ಆಯುಕ್ತರು ಮಾಹಿತಿ ನೀಡಿದ್ದಾರೆ.ಸದ್ಯ 9 ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮುಂದುವರೆದಿದೆ.
ಈ ಪ್ರಕರಣದ ತನಿಖೆಯಲ್ಲಿ ಚೆನ್ನೈ ಮತ್ತು ಆಂಧ್ರ ಪ್ರದೇಶ ಪೊಲೀಸರು ಸಹಕರಿಸಿದ್ದು, ತನಿಖಾ ತಂಡಕ್ಕೆ 5 ಲಕ್ಷ ರೂಪಾಯಿ ಬಹುಮಾನ ಈಗಾಗಲೇ ಘೋಷಿಸಲಾಗಿದೆ. ಹೆಚ್ಚುವರಿಯಾಗಿ 2 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ ಎಂದು ಆಯುಕ್ತ ಸಿಂಗ್ ಹೇಳಿದ್ದಾರೆ. ನವೆಂಬರ್ 19ರಂದು, CMS ಹಣ ಸಾಗಣೆ ವಾಹನವನ್ನು ನಿಲ್ಲಿಸಿ ದರೋಡೆ ನಡೆದಿದೆ. ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದ ಕಸ್ಟೋಡಿಯನ್ ಮತ್ತು ಗನ್‌ಮ್ಯಾನ್‍ರನ್ನು ಗ್ಯಾಂಗ್ ಮಧ್ಯದಲ್ಲಿ ಇಳಿಸಿಬಿಟ್ಟು, ಅವರನ್ನು ಬಿಟ್ಟು ಹಣ ಇರುವ ವಾಹನವನ್ನು ಕಳ್ಳರು ಕೊಂಡೊಯ್ದಿದ್ದಾರೆ.
ಸಿದ್ದಾಪುರ ಠಾಣೆ ಪೊಲೀಸರು CMS ಸಿಬ್ಬಂದಿ ವಿಚಾರಣೆ ವೇಳೆ ಗಂಭೀರ ಅನುಮಾನಕ್ಕೆ ಕಾರಣವಾದ ವರ್ತನೆ ಪತ್ತೆ ಮಾಡಿದ್ದಾರೆ. ಅಷ್ಟು ದೊಡ್ಡ ದರೋಡೆ ನಡೆದಿದ್ದರೂ, ತಮಗೆ ಊಟವೇ ಮುಖ್ಯ ಎಂದು ಸಿಬ್ಬಂದಿ ಹೇಳಿದ್ದರಿಂದ ಪೊಲೀಸರ ಶಂಕೆಗಳು ಹೆಚ್ಚಾಗಿವೆ. ದರೋಡೆ ನಡೆದ ನಂತರ ಎರಡು ಗಂಟೆಗಳ ಕಾಲ CMS ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಅದೇಕೆ? ಎಂದು ವಿಚಾರಿಸುವಾಗ,ಊಟದ ಸಮಯವಾಗಿತ್ತು. ಊಟಕ್ಕೆ ಹೋಗಿದ್ದೆವು ಎಂದು ಸಿಬ್ಬಂದಿ ಹೇಳಿಕೆಯಿಂದ ತನಿಖೆ ಇನ್ನಷ್ಟು ಗಂಭೀರವಾಗಿದೆ.
ಈ ಘಟಕದಲ್ಲಿ ಸಿಬ್ಬಂದಿ ಭಾಗವಹಿಸಿದ್ದರೆಂಬ ಯಾವುದೇ ಸಾಬೀತು ಸಿಕ್ಕಿಲ್ಲ, ಆದರೆ ವಿಚಾರಣೆ ಮುಂದುವರೆದಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

