ಧಾರವಾಡದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗಳಿಗೆ ಪ್ರವೇಶದ ಮೇಲೆ ಜಿಲ್ಲಾಡಳಿತ ಹಾಕಿದ್ದ ನಿರ್ಬಂಧವನ್ನು ಧಾರವಾಡ ಹೈಕೋರ್ಟ್ ಪೀಠ ತೆರವು ಮಾಡಿದೆ. ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನವೆಂಬರ್ 5ರಿಂದ 7ರವರೆಗೆ ಸ್ವಾಮೀಜಿಗಳ ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಬೇಕಾಗಿತ್ತು. ಆದರೆ ಧಾರವಾಡ ಜಿಲ್ಲಾಡಳಿತದಿಂದ, ಸ್ವಾಮೀಜಿಗಳ ಜಿಲ್ಲೆ ಪ್ರವೇಶಕ್ಕೆ ಸಂಪೂರ್ಣ ತಡೆ ಆದೇಶ ಹೊರಡಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಸ್ವಾಮೀಜಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ನವೆಂಬರ್ 19 ರಂದು ನಡೆದ ವಿಚಾರಣೆಯಲ್ಲಿ, ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ಧಾರವಾಡ ಹೈಕೋರ್ಟ್ ಪೀಠ ಇಂದು ತಡೆ ಆದೇಶವನ್ನು ರದ್ದುಪಡಿಸಿದೆ. ನ್ಯಾಯಾಲಯವು, ನವೆಂಬರ್ 4 ರಂದು ಜಿಲ್ಲಾಡಳಿತ ಹೊರಡಿಸಿದ್ದ ನಿರ್ಬಂಧವು ಸಮರ್ಪಕ ಕಾರಣಗಳಿಗೆ ಆಧಾರವಾಗಿಲ್ಲದೆ, ರಾಜಕೀಯ ಪ್ರೇರಿತವಾಗಿರುವ ಸ್ವಭಾವ ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಮೂಲಕ, ಹೈಕೋರ್ಟ್‌ನ ನಿರ್ಧಾರದಿಂದ ಧಾರವಾಡ ಜಿಲ್ಲಾಡಳಿತಕ್ಕೆ ಸ್ಪಷ್ಟ ಹಿನ್ನಡೆ ಸಂಭವಿಸಿದೆ.
ಈ ಪ್ರಕರಣದಲ್ಲಿ, ಕಾರ್ಯಕ್ರಮದ ದಿನಾಂಕ ಮುಗಿದ ಬಳಿಕವೇ ಮಠದ ಪರ ವಕೀಲರು ನ್ಯಾಯಾಲಯಕ್ಕೆ ಮೊರೆಹೋದ ವಿಚಾರವು ಪ್ರಶ್ನೆಯಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲರು, ಜಿಲ್ಲಾಧಿಕಾರಿಯ ಆದೇಶವು ಕೇವಲ ಕಾರ್ಯಕ್ರಮದ ದಿನಗಳಿಗೆ ಸೀಮಿತವಾಗಿರದೆ, ಜನವರಿ 4ರವರೆಗೆ ಸ್ವಾಮೀಜಿಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸಿದ್ದರಿಂದ, ಅದನ್ನು ಪ್ರಶ್ನಿಸಲು ನಾವು ಹೈಕೋರ್ಟ್‌ಗೆ ಹೋಗಿದ್ದೇವೆ ಎಂದು ತಿಳಿಸಿದ್ದಾರೆ.
ಕನ್ನೇರಿ ಶ್ರೀಗಳ ಕಾರ್ಯಕ್ರಮಕ್ಕೆ ತಡೆ ಯಾಕೆ? ಎಂಬ ಪ್ರಶ್ನೆಗೆ ಉತ್ತರವಾಗಿ, ಜಾಗತಿಕ ಲಿಂಗಾಯತ ಮಹಾಸಭಾ, ಸ್ವಾಮೀಜಿಗಳು ಲಿಂಗಾಯತ ಸಮುದಾಯದ ವಿರುದ್ಧ ಅವ್ಯಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂಬ ದೂರನ್ನು ಜಿಲ್ಲಾಧಿಕಾರಿಗೆ ನೀಡಿತ್ತು. ಈ ದೂರಿನ ಆಧಾರದಲ್ಲಿ, ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸ್ವಾಮೀಜಿಗಳ ಜಿಲ್ಲೆ ಪ್ರವೇಶಕ್ಕೆ ನಿಷೇಧ ವಿಧಿಸಿದ್ದರು. ಇದೀಗ ಹೈಕೋರ್ಟ್ ಈ ಆದೇಶವನ್ನು ತೆರವುಗೊಳಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

