ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಿವಾಸ, ಕಾಂಗ್ರೆಸ್ ರಾಜಕಾರಣದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಉಭಯ ನಾಯಕರ ನಿವಾಸಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದ ಮೇಲಂತೂ, ಬಣ ಬಡಿದಾಟ ಜೋರಾಗಿದೆ. ಈ ಮಧ್ಯೆ ಸಿದ್ದು ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರು, ಡಿಕೆಶಿ ಭೇಟಿಯಾಗಿರೋದು ಭಾರೀ ಕುತೂಹಲ ಮೂಡಿಸಿದೆ.
ಡಿಕೆಶಿ ಸಿಎಂ ಆಗಬೇಕು. ಆದ್ರೆ ಈಗಲ್ಲ 2028ಕ್ಕೆ ಎಂದು ಜಮೀರ್ ಹೇಳಿದ್ರು. ಆ ಬೆನ್ನಲ್ಲೇ ಡಿಕೆಶಿ ನಿವಾಸಕ್ಕೆ ಜಮೀರ್ ಭೇಟಿ ಕೊಟ್ಟಿದ್ದಾರೆ. ಕೆಲ ಹೊತ್ತು ಚರ್ಚೆ ಬಳಿಕ ವಾಪಸ್ಸಾಗಿದ್ದಾರೆ. ಆದ್ರೆ, ಏನೆಲ್ಲಾ ಚರ್ಚೆ ಮಾಡಲಾಯ್ತು ಅನ್ನೋ ಮಾಹಿತಿ ಮಾತ್ರ ಗೌಪ್ಯವಾಗಿಯೇ ಇದೆ.
ಜಮೀರ್ ಅಹಮದ್‌ಗೂ ಮುನ್ನ, ಡಿಕೆಶಿ ನಿವಾಸಕ್ಕೆ ಪ್ರಿಯಾಂಕ್ ಖರ್ಗೆ ಕೂಡ ಭೇಟಿ ಕೊಟ್ಟಿದ್ರು. ಹಲವು ಹೊತ್ತು ಕ್ಲೋಸ್ ಡೋರ್ ಮೀಟಿಂಗ್ ಮಾಡಿದ್ದಾರೆ. ನಿನ್ನೆಯಷ್ಟೇ ದಿಲ್ಲಿಗೆ ಹೋಗಿದ್ದ ಪ್ರಿಯಾಂಕ್, ರಾಹುಲ್ ಗಾಂಧಿ ಭೇಟಿಯಾಗಿ, ಮಹತ್ವದ ಮಾತುಕತೆ ನಡೆಸಿದ್ರು. ಇದಾದ ಬಳಿಕ ಬೆಂಗಳೂರಿಗೆ ಬಂದು ಡಿಕೆಶಿ ಭೇಟಿಯಾಗಿರೋದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಹುಲ್ ಗಾಂಧಿ ಏನಾದ್ರೂ ಡಿಕೆಶಿಗಾಗಿ ಸಂದೇಶ ಕಳಿಸಿದ್ರಾ?, ನಾಯಕತ್ವ ಬದಲಾವಣೆ ವಿಚಾರದಲ್ಲಿ ತಾಳ್ಮೆಯಿಂದ ಇರುವಂತೆ ಹೇಳಿದ್ರಾ? ಹೀಗೆ ಹಲವು ಪ್ರಶ್ನೆಗಳು ಎದ್ದಿವೆ. ಒಟ್ನಲ್ಲಿ 2025ನೇ ವರ್ಷ ಕಳೆಯೋದ್ರೊಳಗೆ ಎಲ್ಲವೂ ಫೈನಲ್ ಆಗುವ ಸಾಧ್ಯತೆ ಇದೆ.

