ಕನ್ನಡದ ಉಪೇಂದ್ರ ಅಭಿನಯದ ‘ಶ್ರೀಮತಿ’ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಾಲಿವುಡ್ ನಟಿ ಮತ್ತು ಮಾಜಿ ಮಿಸ್ ಇಂಡಿಯಾ ಸೆಲೀನಾ ಜೇಟ್ಲಿ ತಮ್ಮ ಪತಿ ಪೀಟರ್ ಹಾಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪಗಳನ್ನು ಹೊರಿಸಿ ಮುಂಬೈ ಅಂಧೇರಿ ನ್ಯಾಯಾಲಯವನ್ನು ಮೊರೆ ಹೋಗಿದ್ದಾರೆ. ದೈಹಿಕ, ಮಾನಸಿಕ, ಲೈಂಗಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪಗಳನ್ನು ಅವರು ಮಾಡಿದ್ದಾರೆ.
ಇದಕ್ಕಾಗಿ 50 ಕೋಟಿ ರೂಪಾಯಿ ಪರಿಹಾರ ಮತ್ತು ಮಾಸಿಕ 10 ಲಕ್ಷ ರೂಪಾಯಿ ನಿರ್ವಹಣೆ ಮೊತ್ತವನ್ನು ಕೋರಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈಗಾಗಲೇ ಪೀಟರ್ ಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ವಿಚಾರಣೆ ಡಿಸೆಂಬರ್ 12 ರಂದು ನಡೆಯಲಿದೆ.
ಸೆಲೀನಾ ಜೇಟ್ಲಿ ತಮ್ಮ ಅರ್ಜಿಯಲ್ಲಿ, ಪತಿ ಪೀಟರ್ ತನ್ನ ಆರ್ಥಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವುದಲ್ಲದೆ, ಕೆಲಸ ಮಾಡುವುದಕ್ಕೂ ತಡೆದಿದ್ದಾರೆ ಎಂದು ತಿಳಿಸಿದ್ದಾರೆ. ಅವರು ನನ್ನನ್ನು ಸೇವಕಿ ಎಂದು ಕರೆಯುತ್ತಿದ್ದರು. ನನಗೆ ಶಾರೀರಿಕ, ಮಾನಸಿಕ, ಲೈಂಗಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಸೆಲೀನಾ ಆರೋಪಿಸಿದ್ದಾರೆ.
ಅಕ್ಟೋಬರ್ 11 ರಂದು ಮಧ್ಯರಾತ್ರಿ ಆಸ್ಟ್ರಿಯಾದ ಮನೆಯಿಂದ ಹೊರಬರಬೇಕಾಯಿತು. ಆ ಸಂದರ್ಭದಲ್ಲಿ ನನ್ನ ಮೂವರು ಮಕ್ಕಳನ್ನು ಬಿಟ್ಟು ಭಾರತಕ್ಕೆ ಬರಬೇಕಾಯಿತು. ಮಕ್ಕಳನ್ನು ಭೇಟಿಯಾಗಲು ಅಥವಾ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿದರು. ಪೀಟರ್ ಆಸ್ಟ್ರಿಯಾದಲ್ಲೇ ವಿಚ್ಛೇದನ ಪ್ರಕ್ರಿಯೆ ಆರಂಭಿಸಿದ್ದಾರೆ ಎಂಬುದನ್ನೂ ಅವರು ಹೇಳಿದರು.
ಲೀನಾ ಜೇಟ್ಲಿ ಮುಂಬೈನ ಅಂಧೇರಿಯಲ್ಲಿರುವ ತಮ್ಮ ಮನೆಯನ್ನು ಹಾಗೂ ಷೇರುಗಳನ್ನು ಪತಿ ಪೀಟರ್ ಹಸ್ತಕ್ಷೇಪ ಮಾಡದಂತೆ ಕೋರ್ಟ್ ನಿರ್ದೇಶಿಸಲು ಕೋರಿದ್ದಾರೆ. ಜೊತೆಗೆ ಮುಂಬೈ ಮತ್ತು ವಿಯೆನ್ನಾದಲ್ಲಿನ ಆಸ್ತಿಗಳನ್ನು ತಮ್ಮ ನಿಯಂತ್ರಣದಿಂದ ತೆಗೆದುಹಾಕಿದ ಪರಿಣಾಮ ಉಂಟಾದ ನಷ್ಟಕ್ಕೆ ₹1.26 ಕೋಟಿ ನಿಧಿಯ ದುರುಪಯೋಗಕ್ಕೆ ₹32 ಲಕ್ಷ ಪರಿಹಾರವನ್ನು ಕೂಡ ಕೋರಿದ್ದಾರೆ.
ವರದಿ : ಲಾವಣ್ಯ ಅನಿಗೋಳ

