ಕ್ಷಣಕ್ಕೊಂದು ಹೇಳಿಕೆ, ದಿನಕ್ಕೊಂದು ಟ್ವಿಸ್ಟ್. ಪವರ್ ಶೇರಿಂಗ್ ವಿಚಾರ ರಾಜ್ಯ ಕಾಂಗ್ರೆಸ್ ಅಂಗಳದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಆಂತರಿಕ ಪೈಪೋಟಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದಂತಿದೆ. ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಹೊಸ ಹೇಳಿಕೆಗಳು ಪಕ್ಷದ ಒಳರಾಜಕೀಯಕ್ಕೆ ಮತ್ತಷ್ಟು ಬೆಂಕಿ ಹಚ್ಚಿವೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗ್ತಿದ್ದಂತೆ ಡಿಕೆ ಬ್ರದರ್ಸ್ ಅಸಲಿ ಆಟ ಶುರುಮಾಡಿದಂತೆ ಕಾಣ್ತಿದೆ. ಡಿಸಿಎಂ ಡಿಕೆಶಿ ಈಗಾಗಲೇ ಅನೇಕ ಸಚಿವರು ಹಾಗೂ ಶಾಸಕರನ್ನ ಭೇಟಿಯಾಗಿ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ತಿದ್ದಾರೆ. ಇದರ ನಡುವೆ ಡಿಕೆ ಸುರೇಶ್ ಬಳಿಕ ಡಿಕೆ ಶಿವಕುಮಾರ್ ಕೊಟ್ಟ ಮಾತು ಮರೆಯಬಾರದು ಎಂದು ಮಾರ್ಮಿಕವಾಗಿ ನುಡಿದ್ದಾರೆ.
ಸಂವಿಧಾನ ರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ವೇದಿಕೆಯ ಮೇಲೆ ಇದ್ದವರನ್ನ ಉದ್ದೇಶಿಸಿ ಇವರಿಗೆಲ್ಲಾ ಕುರ್ಚಿ ಬೆಲೆ ಗೊತ್ತಿಲ್ಲ. ಹಿಂದೆ ನಿಂತಿರುವವರು ಹಿಂದೆಯೇ ಇರ್ತಾರೆ. ಅವರಿಗೆ ಯಾವ ಕುರ್ಚಿಯೂ ಸಿಗಲ್ಲ ಎಂದು ಹೇಳಿಕೆ ನೀಡಿದರು. ಈ ಮಾತು ಕೇಳಿದ ಸಭೆಯಲ್ಲಿದ್ದವರು ಕ್ಷಣಕಾಲ ಶಾಕ್ ಆಗಿದ್ದಾರೆ.
ಹೈಕಮಾಂಡ್ ನಾಯಕರು ಭೇಟಿಗೆ ಟೈಮ್ ಕೊಡ್ತಿಲ್ಲ. ಸಿದ್ದರಾಮಯ್ಯ ಕೂಡ ಸಿಎಂ ಕುರ್ಚಿ ಬಿಟ್ಟು ಕೊಡುವ ಮನಸ್ಸು ಮಾಡ್ತಿಲ್ಲ. ಹೀಗಾಗಿ ಅಧಿಕಾರ ಹಂಚಿಕೆ ಬಗ್ಗೆ ಸ್ಪಷ್ಟನೆ ಸಿಗದೆ ಡಿಸಿಎಂ ಡಿಕೆಶಿ ಕೊಂಚ ವಿಚಲಿತರಾದಂತೆ ಕಾಣ್ತಿದೆ. ಇದೀಗ ಡಿಕೆಶಿ, ಕುರ್ಚಿ ಬೆಲೆ ಗೊತ್ತಿಲ್ಲ , ಹಿಂದೆ ಇರೋರು ಮುಂದೆ ಬರೋಕೆ ಆಗಲ್ಲ ಎನ್ನುತ್ತಾ ರಾಜಕೀಯ ವಲಯದಲ್ಲಿ ಈ ಹೇಳಿಕೆಯನ್ನು ಡಿಕೆಶಿ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ ಮಾತು ಎಂದು ವಿಶ್ಲೇಷಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ

