ʻಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼ ಸಿಎಂ ಸಿದ್ದರಾಮಯ್ಯ ಕಡೆಗೆ ಶಾರ್ಪ್ ಮೆಸೇಜ್?

ರಾಜ್ಯದಲ್ಲಿ ಸಿಎಂ–ಡಿಸಿಎಂ ಪವರ್ ಶೇರಿಂಗ್ ವಿವಾದ ತೀವ್ರವಾಗಿರುವ ಸಂದರ್ಭದಲ್ಲಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

“Word Power is World Power. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಅಂತ ಇಂದು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ಇದು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಿದಂತಿದೆ ಎಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ.

ನಿನ್ನೆ ಕೂಡ ಡಿಕೆ ಶಿವಕುಮಾರ್ ಸಾರ್ವಜನಿಕ ವೇದಿಕೆಯಲ್ಲಿ ಇದೇ ಮಾತನ್ನಾಡಿದ್ದರಿಂದ, ಎರಡು ದಿನಗಳಲ್ಲಿ ಎರಡು ಬಾರಿ ‘ಕೊಟ್ಟ ಮಾತು’ ನೆನಪಿಸಿದ್ದು ಗಮನಸೆಳೆದಿದೆ. ಡಿಕೆಶಿ ತಮ್ಮ ಪೋಸ್ಟ್‌ನಲ್ಲಿ, ಒಮ್ಮೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಜಗತ್ತಿನ ಅತಿದೊಡ್ಡ ಶಕ್ತಿ.

ನಾನು ಸೇರಿದಂತೆ, ನ್ಯಾಯಾಧೀಶರಾಗಲಿ, ರಾಷ್ಟ್ರಪತಿಯಾಗಲಿ, ಯಾರೇ ಆಗಿರಲಿ ನುಡಿದಂತೆ ನಡೆಬೇಕು ಎಂದು ಬರೆದು, ಮಾತಿನ ಮೌಲ್ಯ ಕುರಿತು ತೀವ್ರ ಸಂದೇಶ ನೀಡಿದ್ದಾರೆ. ರಾಜಕೀಯ ವಲಯದಲ್ಲಿ ಇದನ್ನೇ ಸಿಎಂ ಸಿದ್ದರಾಮಯ್ಯ ವಿರುದ್ಧದ ಪರೋಕ್ಷ ಒತ್ತಡ ಎಂದು ಓದುತ್ತಿದ್ದಾರೆ.

ಇದರ ಮಧ್ಯೆ, ರಾಜ್ಯ ಕಾಂಗ್ರೆಸ್‌ನ ಕುರ್ಚಿ ಕಿತ್ತಾಟ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಇಂದು ದೆಹಲಿಯ ಕಾಂಗ್ರೆಸ್ ಭವನದಲ್ಲಿ ನಿರ್ಣಾಯಕ ಹೈಕಮಾಂಡ್ ಸಭೆ ನಡೆಯಲಿದ್ದು, ಸಿಎಂ–ಡಿಸಿಎಂ ಪವರ್ ಶೇರಿಂಗ್ ವಿಷಯಕ್ಕೆ ಸ್ಪಷ್ಟತೆ ಬರಬಹುದೆಂಬ ನಿರೀಕ್ಷೆ ಇದೆ. ಅದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಒಟ್ಟು ಸೇರಿ ಇಂದು ಸಭೆ ನಡೆಸಲಿದ್ದಾರೆ ಅಂತ ಹೇಳಲಾಗ್ತಿದೆ.

ಶನಿವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತೊಂದು ಮಹತ್ವದ ಸಭೆ ನಿಗದಿಯಾಗಿದ್ದು, ಅದಕ್ಕೂ ಮುನ್ನ ಸಿಎಂ–ಡಿಸಿಎಂ ಮುಖಾಮುಖಿಯಾಗಿ ಇವರ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮೊದಲು ಹೈಕಮಾಂಡ್ ತನ್ನ ನಿಲುವು ಸ್ಪಷ್ಟಪಡಿಸಬೇಕೆಂಬ ಒತ್ತಡ ಹೆಚ್ಚಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author