ಹಾಂಗ್ ಕಾಂಗ್‌ನ ತೈ ಪೊ ಪ್ರದೇಶದಲ್ಲಿರುವ ದೊಡ್ಡ ವಸತಿ ಸಂಕೀರ್ಣ ವಾಂಗ್ ಫುಕ್ ಕೋರ್ಟ್‌ನಲ್ಲಿ ಬುಧವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ನಗರವನ್ನೇ ಬೆಚ್ಚಿಬೀಳಿಸಿದೆ. 32 ಅಂತಸ್ತಿನ ವಾಂಗ್ ಚಿಯೋಂಗ್ ಹೌಸ್‌ನಲ್ಲಿ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬೆಂಕಿ ಆರಂಭಗೊಂಡಿದ್ದು, ಕಟ್ಟಡವನ್ನು ಆವರಿಸಿದ್ದ ಬಿದಿರಿನ ಸ್ಕ್ಯಾಫೋಲ್ಡಿಂಗ್‌ಗೆ ತೀವ್ರವಾಗಿ ಚಾಚಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಜ್ವಾಲೆಗಳು ಪಕ್ಕದ ಗೋಪುರಗಳಿಗೆ ಹರಡಿದ್ದು, ಎಂಟು ಬ್ಲಾಕ್‌ಗಳಲ್ಲಿ ಏಳು ಬೆಂಕಿಗಾಹುತಿಯಾದವು.
ಅಗ್ನಿಶಾಮಕ ದಳವು 128 ಅಗ್ನಿಶಾಮಕ ವಾಹನಗಳು, 57 ಆಂಬ್ಯುಲೆನ್ಸ್‌ಗಳು ಮತ್ತು ಸುಮಾರು 888 ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಿತು. ತೀವ್ರ ತಾಪಮಾನ ಮತ್ತು ಗಾಳಿಯ ಕಾರಣದಿಂದ ಮೇಲಿನ ಮಹಡಿಗಳನ್ನು ತಲುಪಲು ತಂಡಗಳಿಗೆ ಕಷ್ಟವಾಗಿದ್ದು, ಅನೇಕ ನಿವಾಸಿಗಳು ಮನೆಗಳಲ್ಲಿ ಸಿಲುಕಿಕೊಂಡರು. ಒಂಬತ್ತು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ವೈದ್ಯಕೀಯ ಚಿಕಿತ್ಸೆ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ; 15 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈಗಾಗಲೇ 44 ಮಂದಿ ಮೃತರು ಎಂದು ದೃಢಪಡಿಸಲಾಗಿದ್ದು, 279 ಮಂದಿ ಇನ್ನೂ ಕಾಣೆಯಾಗಿದ್ದಾರೆ.
ಸಂಕೀರ್ಣದಲ್ಲಿ ಹೆಚ್ಚಿನವರು ವೃದ್ಧರು ಮತ್ತು ಚಲನೆಗೆ ಅಸಮರ್ಥರಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣಗೊಂಡಿತು. ನಿರ್ವಹಣಾ ಕಾಮಗಾರಿಯಿಂದ ಅನೇಕ ಕಿಟಕಿಗಳು ಮುಚ್ಚಲ್ಪಟ್ಟಿದ್ದರಿಂದ ಹಲವರಿಗೆ ಬೆಂಕಿ ಭುಗಿಲೆದ್ದ ವಿಚಾರ ಸಕಾಲದಲ್ಲಿ ತಿಳಿದಿರಲಿಲ್ಲ. ಸುರಕ್ಷತೆಗಾಗಿ ನಿವಾಸಿಗಳಿಗೆ ಬಾಗಿಲು–ಕಿಟಕಿಗಳನ್ನು ಮುಚ್ಚಿ ಒದ್ದೆಯಾದ ಬಟ್ಟೆಗಳಿಂದ ಗಾಳಿಯನ್ನು ತಡೆಗಟ್ಟುವಂತೆ ಸೂಚಿಸಲಾಯಿತು.
ಬೆಂಕಿಯ ಮೂಲ ಮತ್ತು ಅಸಾಮಾನ್ಯವಾಗಿ ವೇಗವಾಗಿ ಹರಡಲು ಕಾರಣಗಳ ಕುರಿತು ತನಿಖೆ ಮುಂದುವರಿದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಿದಿರಿನ ಸ್ಕ್ಯಾಫೋಲ್ಡಿಂಗ್ ಮತ್ತು ಕಟ್ಟಡ ಹೊರಗಿನ ವಸ್ತುಗಳು ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿದ್ದಿರಬಹುದು. ಘಟನೆಯ ಸಂಬಂಧ ಮೂವರು ಶಂಕಿತರನ್ನು ಬಂಧಿಸಲಾಗಿದೆ, ಆದರೆ ಅವರ ಮೇಲೆ ಇರುವ ಆರೋಪಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

