ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕಾದಾಟ ಜೋರಾಗಿದೆ. ಇಂದು ಎಕ್ಸ್ ನಲ್ಲಿ ಡಿಸಿಎಂ ಡಿಕೆಶಿವಕುಮಾರ್ ಮಾಡಿರುವ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. ಇತ್ತ ನಿರ್ಮಲಾನಂದ ಸ್ವಾಮೀಜಿಗಳ ಹೇಳಿಕೆ ಕೂಡ ಬಹಳ ಚರ್ಚೆಗೆ ಕಾರಣವಾಗಿದೆ. ಅವರ ಹೇಳಿಕೆಗೆ ಕಾಗಿನೆಲೆ ಸ್ವಾಮೀಜಿಗಳು ಸೇರಿದಂತೆ ತಿರುಗೇಟನ್ನು ನೀಡುತ್ತಿದ್ದಾರೆ. ಇನ್ನು ಇತ್ತ ಗೊಂದಲ ಸೆಟಲ್ ಮಾಡುವ ಸುಳಿವು ನೀಡಿದ್ದಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.
ದೆಹಲಿಗೆ ಪ್ರಮುಖ ನಾಯಕರನ್ನು ಕರೆಸಿ ಗೊಂದಲವನ್ನು ಸೆಟಲ್ ಮಾಡ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಾನು ದೆಹಲಿಗೆ ಹೋದ ಮೇಲೆ ರಾಜ್ಯದ ಪ್ರಮುಖ ಮೂರ್ನಾಲ್ಕು ಜನರನ್ನು ಕರೆಸಿ ಮಾತಾಡುತ್ತೇನೆ ಎಂದರು. ದೆಹಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕರೆಸಿ ಮಾತುಕತೆ ನಡೆಸುತ್ತೀರಾ ಎಂಬ ಪ್ರಶ್ನೆಗೆ, ಅವರಿಗೆಲ್ಲಾ ಕರೆಸಿಯೇ ಮಾತಾಡಿ ಗೊಂದಲ ಸೆಟಲ್ ಮಾಡ್ತೀವಿ. ಯಾವ ರೀತಿ ಮುಂದೆ ನಡೆಯಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬಳಿಕ ದೆಹಲಿಗೆ ತೆರಳಿದ್ದ ಖರ್ಗೆ ಇದೀಗ ಮತ್ತೆ ರಾಜ್ಯಕ್ಕೆ ವಾಪಸ್ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಖರ್ಗೆ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದೆ.
ಸಚಿವ ಆಕಾಂಕ್ಷಿಗಳು ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಮನವಿ ಮುಂದಿಡುವ ಸಾಧ್ಯತೆ ಇದೆ. ಆದರೆ ಇದೇ ಸಂದರ್ಭದಲ್ಲಿ ಮತ್ತೆ ಡಿಕೆ ಶಿವಕುಮಾರ್ ಅವರು ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ನಾಯಕತ್ವ ಬಿಕ್ಕಟ್ಟು ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಬಿಹಾರ ಚುನಾವಣೆ, ಹಿಂದುಳಿದ ವರ್ಗಗಳ ಪರವಾದ ಕಾರ್ಯಕ್ರಮ ರೂಪಿಸುವ ಹಿನ್ನೆಲೆಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯ ಬಳಿಕ ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆಯೂ ಚರ್ಚೆ ಆಗುವ ಸಾಧ್ಯತೆ ಇದೆ.
ಇನ್ನು ಸದ್ಯದ ಬೆಳವಣಿಗೆ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಆಗದಂತೆ ತೀರ್ಮಾನ ಕೈಗೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಹಾಗಾಗಿ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸಿ ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಇದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




