ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿ ಕದನ ಮತ್ತಷ್ಟು ತೀವ್ರಗೊಂಡಿದೆ. ಬಣಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಒಕ್ಕಲಿಗ ಮತ್ತು ಅಹಿಂದ ಸಂಘಟನೆಗಳ ಪ್ರತ್ಯೇಕ ಹೋರಾಟಕ್ಕೂ ಸ್ವಾಮೀಜಿಗಳ ಹೇಳಿಕೆಗಳು ಬಲ ನೀಡಿ ರಾಜಕೀಯ ಚರ್ಚೆ ಹೆಚ್ಚಿಸಿವೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ಶಿಬಿರದ ಆರು ಸಚಿವರು ದೆಹಲಿಗೆ ದಂಡಯಾತ್ರೆಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಹೆಚ್.ಕೆ. ಪಾಟೀಲ್, ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಇನ್ನಿಬ್ಬರು ಸಚಿವರು ನಾಳೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ಪಡೆಯಲು ಭೇಟಿ ನೀಡಬೇಕು ಎಂಬ ಅಭಿಪ್ರಾಯವನ್ನು ಪರಮೇಶ್ವರ್ ಅವರು ಸಿಎಂಗೆ ತಿಳಿಸಿದ್ದು, ಸಿದ್ಧರಾಮಯ್ಯ ಅವರು ಕೂಡ ಅನುಮತಿ ನೀಡಿದರೆಂದು ಮೂಲಗಳು ತಿಳಿಸಿವೆ.
ಎರಡು ವರ್ಷಕ್ಕೂ ಹೆಚ್ಚು ಆಡಳಿತದ ನಂತರ ಸಿಎಂ–ಡಿಸಿಎಂ ನಡುವಿನ ಪದವಿ ಕಾದಾಟ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಸಭೆ ನಡೆಸಿದ್ದು, ಬಿಹಾರ ಚುನಾವಣಾ ಫಲಿತಾಂಶಗಳ ಜೊತೆಗೆ ಕರ್ನಾಟಕದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಕೆಲ ದಿನಗಳ ಹಿಂದೆ ಡಿಕೆ ಶಿವಕುಮಾರ್ ಪಾಳಯದ ನಾಯಕರು ದೆಹಲಿಗೆ ಭೇಟಿ ನೀಡಿದ್ದರೆ, ಈಗ ಅವರಿಗೆ ಟೆಕ್ಕರ್ ನೀಡುವಂತಾಗಿ ಸಿಎಂ ಶಿಬಿರದ ಹಿರಿಯ ನಾಯಕರು ರಾಜಧಾನಿ ಕಡೆ ಮುಖ ಮಾಡಿರುವುದು ಕಾಂಗ್ರೆಸ್ ಒಳಜಗಳ ಮತ್ತಷ್ಟು ಗಂಭೀರವಾಗಿರುವ ಸೂಚನೆ ನೀಡಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

