ತುಮಕೂರು ಜಿಲ್ಲೆಯ ಪಾವಗಡದಲ್ಲಿ ಭ್ರಷ್ಟಾಚಾರದ ವಿರುದ್ಧ ವಿಶಿಷ್ಟವಾದ ಪ್ರತಿಭಟನೆ ನಡೆದಿದೆ. ಬಿಜೆಪಿ ಓಬಿಸಿ ಮುಖಂಡ ಮುರುಳಿ ಅವರು ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಭಿಕ್ಷಾಟನೆ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೆಂಕಾಟಪುರ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹೇಮಂತ್ ಅವರ ವಿರುದ್ಧ ಲಂಚ ಬೇಡಿಕೆಯ ಆರೋಪ ಹೊರಿಸಿದ್ದಾರೆ. ಅನಿತಾ ಎಂಬುವರ ಹೆಸರಿನಲ್ಲಿ ದಾಖಲಾಗಿದ್ದ 30×40 ನಿವೇಶನದ ಖಾತೆ ಬದಲಾವಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ, ಕಾರ್ಯದರ್ಶಿಯು ವಿಳಂಬ ಮಾಡುತ್ತಿದ್ದನು ಎಂದು ಮುರುಳಿ ದೂರಿದ್ದಾರೆ. ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸಿದ್ದರೂ, ಹೆಚ್ಚುವರಿ ಲಂಚ ಕೇಳಿದ ಆರೋಪವೂ ಇದೆ.
ಈ ಸಂದರ್ಭದಲ್ಲಿ, ಮತ್ತೆ ಹಣ ಇಲ್ಲ… ಕೈಲಾದಷ್ಟು ಕೊಟ್ಟಿದ್ದೇನೆ ಎಂಬ ಆಕ್ರೋಶ ವ್ಯಕ್ತಪಡಿಸಲು, ಅಧಿಕಾರಿಗೆ ಲಂಚ ಕೊಡಲು ಹಣ ಬೇಡಿ ಭಿಕ್ಷಾಟನೆಗೆ ಇಳಿದಿರುವುದು ಸ್ಥಳೀಯರಲ್ಲಿ ಗಮನ ಸೆಳೆದಿದೆ. ಮುರುಳಿ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹೇಮಂತ್ ವಿರುದ್ಧ ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

