Friday, November 28, 2025

Latest Posts

ಬೈಕ್‌ ಟ್ಯಾಕ್ಸಿಗೆ NO ಎನ್ನುತ್ತಿದೆ ವರದಿ : ನಿಜ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ!

- Advertisement -

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಯನ್ನು ಕಾನೂನುಬದ್ಧಗೊಳಿಸಬಾರದು ಎಂದು ಸರ್ಕಾರ ರಚಿಸಿದ ಉನ್ನತಾಧಿಕಾರಿಗಳ ಸಮಿತಿ ಶಿಫಾರಸು ಮಾಡಿದೆ. ಬೈಕ್‌ ಟ್ಯಾಕ್ಸಿ ಸೇವೆ ಅನುಮತಿಸಿದರೆ ಸಂಚಾರ ದಟ್ಟಣೆ, ರಸ್ತೆ ಅಪಘಾತಗಳು ಮತ್ತು ಮಹಿಳಾ ಸುರಕ್ಷತೆ ಸಂಬಂಧಿಸಿದ ಸವಾಲುಗಳು ಹೆಚ್ಚುವ ಸಾಧ್ಯತೆ ಇದೆ ಎಂದು ಸಮಿತಿ ವರದಿಯಲ್ಲಿ ತಿಳಿಸಲಾಗಿದೆ.

ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿಟಿಯು ಬೈಕ್‌ ಟ್ಯಾಕ್ಸಿಯ ಪರಿಣಾಮಗಳ ಮೇಲೆ ಅಧ್ಯಯನ ಮಾಡಿ, ತನ್ನ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಬೆಂಗಳೂರಿನಲ್ಲಿ 2015ರಿಂದ 2025ರ ನಡುವೆ ಜನಸಂಖ್ಯೆ 42% ಹೆಚ್ಚಳವಾಗಿರುವಾಗ, ಬೈಕ್‌ಗಳ ಸಂಖ್ಯೆ 98% ಮತ್ತು ಕಾರುಗಳ ಸಂಖ್ಯೆ 79% ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಬಿಎಂಟಿಸಿ ಬಸ್‌ಗಳ ಸಂಖ್ಯೆ ಕೇವಲ 14% ಮಾತ್ರ ಹೆಚ್ಚಿದೆ. ಈಗಾಗಲೇ ನಗರದಲ್ಲಿ 82.83 ಲಕ್ಷ ಬೈಕ್‌ಗಳು ಮತ್ತು 23.83 ಲಕ್ಷ ಕಾರುಗಳು ಸಂಚರಿಸುತ್ತಿದ್ದು, ಒಟ್ಟು 1.06 ಕೋಟಿ ಜನಗಳು ದಟ್ಟಣೆಗೆ ಕಾರಣವಾಗಿವೆ ಎಂದು ವರದಿ ಹೇಳುತ್ತದೆ.

ಬೈಕ್‌ ಟ್ಯಾಕ್ಸಿಗೆ ಅನುಮತಿ ದೊರೆತರೆ, ನಗರದಲ್ಲಿ ಬೈಕ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚಿ, ಟ್ರಾಫಿಕ್ ಮತ್ತು ಮಾಲಿನ್ಯ ಪ್ರಮಾಣ ಹೆಚ್ಚುತ್ತದೆ. ಒಂದು ಬಸ್‌ ಸಂಚರಿಸುವ ಜಾಗದಲ್ಲಿ 30 ಬೈಕ್‌ಗಳು ಬೇಕಾಗುತ್ತದೆ; ಆದ್ದರಿಂದ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸಲು ಗಮನ ಕೊಡಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಶುಲ್ಕದ ವಿಷಯದಲ್ಲೂ ಬೈಕ್‌ ಟ್ಯಾಕ್ಸಿ ದುಬಾರಿ. 2 ಕಿ.ಮೀ ಪ್ರಯಾಣಕ್ಕೆ ₹48 ವಿಧಿಸುವ ಬೈಕ್‌ ಟ್ಯಾಕ್ಸಿಗೆ ಬದಲಾಗಿ, ಬಿಎಂಟಿಸಿ ಬಸ್‌ನಲ್ಲಿ 2 ಕಿ.ಮೀಗೆ ಕೇವಲ ₹6 ಹಾಗೂ 25–30 ಕಿ.ಮೀ ಪ್ರಯಾಣಕ್ಕೆ ₹32 ಮಾತ್ರ ದರವಿದೆ. ಬಸ್‌ನಲ್ಲಿ ಸರಾಸರಿ 30–40 ಜನರ ಪ್ರಯಾಣ ಸಾಧ್ಯವಾಗುತ್ತದೆ ಎಂಬುದನ್ನು ವರದಿ ಉಲ್ಲೇಖಿಸುತ್ತದೆ.

ಸಮಿತಿಯು ಮಹಿಳಾ ಸುರಕ್ಷತೆಯನ್ನು ಗಂಭೀರವಾಗಿ ಉಲ್ಲೇಖಿಸಿದ್ದು, ಹಿಂದಿನ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆಯಲ್ಲಿ ಮಹಿಳಾ ಪ್ರಯಾಣಿಕರ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚಿದ ಕಾರಣ ನಿಯಮವೇ ರದ್ದು ಮಾಡಲಾಗಿತ್ತು ಎಂದು ಸೂಚಿಸಿದೆ. ಜೊತೆಗೆ, ಅನೇಕ ಬೈಕ್‌ಗಳಲ್ಲಿ ವಿಮೆ ಇಲ್ಲದಿದ್ದರೂ ಸೇವೆ ನೀಡುವ ಸಾಧ್ಯತೆ ಹೆಚ್ಚಿನ ಅಪಾಯವನ್ನು ಸೃಷ್ಟಿಸುತ್ತದೆ ಎಂದಿದೆ.

ಬೈಕ್‌ ಟ್ಯಾಕ್ಸಿಯನ್ನು ನಿಷೇಧಿಸಬೇಕು ಎಂಬುದರ ಮೇಲೆ ಸಮಿತಿಯ ಎಲ್ಲಾ ಸದಸ್ಯರು ಒಮ್ಮತ ವ್ಯಕ್ತಪಡಿಸಿದ್ದಾರೆ. ಸಮಿತಿಯಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ, ನಗರ ಭೂಸಾರಿಗೆ ಆಯುಕ್ತರು, ಕಾರ್ಮಿಕ ಮತ್ತು ಸಾರಿಗೆ ಸುರಕ್ಷತಾ ಅಧಿಕಾರಿಗಳು, ಬಿಎಂಟಿಸಿ ನಿರ್ದೇಶಕರು, ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತರು, ಬಿಎಂಆರ್‌ಸಿಎಲ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿಗಳು ಸೇರಿದ್ದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss