ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿಯ ಐತಿಹಾಸಿಕ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಠದ ಪ್ರಸಿದ್ಧ ಕನಕನ ಕಿಂಡಿಗೆ ಅರ್ಪಿಸಿರುವ ಸ್ವರ್ಣ ಕವಚದ ಲೋಕಾರ್ಪಣೆಯನ್ನು ಪ್ರಧಾನಿ ಅವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ವೇಳೆ ವೇದ ಮಂತ್ರಗಳ ಪಠಣ, ಧಾರ್ಮಿಕ ವಿಧಿವಿಧಾನಗಳು ಸಾಂಪ್ರದಾಯಿಕ ರೀತಿಯಲ್ಲಿ ಜರುಗಿದವು. ಲಕ್ಷ ಕಂಠ ಗೀತಾ ಪಾರಾಯಣ ಬಳಿಕ ಮೋದಿ ಎಲ್ಲರಿಗೂ ನಮಸ್ಕಾರ ಅಂತ ಕನ್ನಡದಲ್ಲೇ ಮಾತು ಆರಂಭಿಸಿದ್ರು. ಜೈ ಶ್ರೀಕೃಷ್ಣ ಎಂದು ಮೂರು ಬಾರಿ ಮೋದಿ ಘೋಷಣೆ ಮಾಡಿದ್ದಾರೆ. ಕೃಷ್ಣನೂರಿಗೆ ಬಂದಿದ್ದು ನನ್ನ ಪರಮ ಸೌಭಾಗ್ಯ. ಇವತ್ತು ಶ್ರೀಕೃಷ್ಣ, ಮಧ್ವಾಚಾರ್ಯರ ಆಶೀರ್ವಾದ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪಹಲ್ಗಾಮ್‌ನಲ್ಲಿ ಕನ್ನಡಿಗರು ಪ್ರಾಣ ತೆತ್ತಿದ್ದಾರೆ. ನವಭಾರತ ಯಾರ ಮುಂದೆಯೂ ತಲೆಬಾಗಲ್ಲ. ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು. ಮಹಿಳೆಯರು, ನಾಗರಿಕರ ರಕ್ಷಣೆ ನಮ್ಮ ಹೊಣೆ. ಉಡುಪಿ ಕ್ಷೇತ್ರ ಭಕ್ತಿ ಹಾಗೂ ಸೇವೆಯ ಸಂಗಮ ಕ್ಷೇತ್ರ. ಅಯೋಧ್ಯೆಯಿಂದ ಉಡುಪಿಯವರೆಗೂ ರಾಮ ಭಕ್ತರು ಸಾಕ್ಷಿಯಾಗಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.
ಮಧ್ವಾಚಾರ್ಯರರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಧರ್ಮಕಾರ್ಯದಲ್ಲಿ ತೊಡಗಿವೆ. ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ. ನನ್ನಂತ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಯೋಜನೆಗಳನ್ನ ಮಾಡಲಾಗಿದೆ ಎಂದು ಮೋದಿ ಹೇಳಿದರು.
ನನ್ನ ಜನ್ಮ ಗುಜರಾತ್‌ನಲ್ಲಿ ಆಗಿದೆ. ಗುಜರಾತ್ ಹಾಗೂ ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆತ್ಮೀಯ, ಆಧ್ಯಾತ್ಮಿಕ ಖುಷಿ ನೀಡಿದೆ. ಉಡುಪಿ ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಲಕ್ಷ ಕಂಠದ ಮೂಲಕ ಗೀತಾದ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರೋದು ಹೊಸ ಶಕ್ತಿ ನೀಡಿದೆ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ

