ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕತ್ವದ ವಿಷಯ ತೀವ್ರವಾಗುತ್ತಿದ್ದಂತೆ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಅವರು ಅಹಿಂದ ಸಮುದಾಯದಿಂದ ಕಾಂಗ್ರೆಸ್‌ಗೆ ಶೇ.70ರಷ್ಟು ಮತ ಬಂದಿದ್ದರೂ, ಒಕ್ಕಲಿಗರಿಂದ ಕೇವಲ ಶೇ.20ರಷ್ಟು ಮತ ಸಿಕ್ಕಿದೆ ಎಂದು ಆರೋಪಿಸಿದ್ದಾರೆ. ವೋಟು ಹಾಕುವುದು ನಾವು, ಮಜಾ ಮಾಡುವುದು ಒಕ್ಕಲಿಗರೇ? ಎಂದು ಪ್ರಶ್ನಿಸಿದ್ದಾರೆ. ಒಕ್ಕಲಿಗರ ಸಂಘದ ಪತ್ರಿಕಾಗೋಷ್ಠಿ ನಂತರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದರೆ ಸುಮ್ಮನಿರಲ್ಲ, ರಾಜ್ಯವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿ.ಕೆ. ಶಿವಕುಮಾರ್ ಪಕ್ಷಕ್ಕಾಗಿ ಜೈಲಿಗೆ ಹೋದರು ಎನ್ನುವ ಮಾತನ್ನು ತಿರಸ್ಕರಿಸಿದ ರಾಮಚಂದ್ರಪ್ಪ, “ಜನರಿಗೆ ಅವರು ಏನಿಗಾಗಿ ಜೈಲಿಗೆ ಹೋದರು ಗೊತ್ತಿದೆ. ಯೋಜನಾ ಪ್ರಾಧಿಕಾರಗಳನ್ನೆಲ್ಲಾ ಒಕ್ಕಲಿಗರಿಗೆ ಕೊಟ್ಟವರು ಶಿವಕುಮಾರ್ ಎಂದು ಆರೋಪಿಸಿದರು. ಸಿದ್ದರಾಮಯ್ಯ ಪರವಾಗಿ 80–90 ಮಂದಿ ಶಾಸಕರು ಇದ್ದಾರೆ, ಅವರನ್ನು ಹೆದರಿಸಿದರೆ ಎಲ್ಲರೂ ಒಂದೇ ಸಾರಿ ರಾಜೀನಾಮೆ ನೀಡಬಹುದು ಎಂದು ಎಚ್ಚರಿಸಿದರು.
ಸಿದ್ದರಾಮಯ್ಯರನ್ನು ಬದಲಿಸುವವರಿಲ್ಲ. ಬದಲಾಯಿಸಬೇಕಾದರೆ ಡಾ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ನೀಡಿ ಎಂದು ರಾಮಚಂದ್ರಪ್ಪ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ ಎಂಬ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ಹೇಳಿ, ಸಿದ್ದರಾಮಯ್ಯ ಮಾತುಕೊಟ್ಟಿದ್ದರೆ ಹೈಕಮಾಂಡ್ ಹೇಳಲಿ ಅಥವಾ ಡಿ.ಕೆ. ಶಿವಕುಮಾರ್ ಹೇಳಲಿ. ಹೇಳಿದರೆ ನಾವೇ ರಾಜೀನಾಮೆ ಕೊಡಿಸುತ್ತೇವೆ ಎಂದು ಸವಾಲು ಹಾಕಿದರು.
ಅದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯ ರಾಜಕೀಯ ಹೇಳಿಕೆಗಳನ್ನೂ ಅವರು ಟೀಕಿಸಿ, ಅಧ್ಯಾತ್ಮ ಬಿಡಿ ರಾಜಕೀಯಕ್ಕೆ ಬರಬೇಕಾದರೆ ಯೋಗಿ ಆದಿತ್ಯನಾಥ್ ರೀತಿ ಮುಖ್ಯಮಂತ್ರಿ ಆಗಿ ಎಂದು ಹರಿಹಾಯ್ದು, ಮಠದ ಧಾರ್ಮಿಕ ಕಾರ್ಯಗಳಿಗೆ ಗೌರವವಿದ್ದರೂ ಕಾಂಗ್ರೆಸ್ ರಾಜಕೀಯಕ್ಕೆ ಹಸ್ತಕ್ಷೇಪ ಸಹಿಸಲಾಗುವುದಿಲ್ಲ ಎಂದು ಕಟುವಾಗಿ ಸ್ಪಷ್ಟಪಡಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

