ದಿತ್ವಾ’ ಚಂಡಮಾರುತ ತಮಿಳುನಾಡನ್ನು ಸಮೀಪಿಸುತ್ತಿದ್ದು, ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ ಜಾರಿಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಪ್ರಸ್ತುತ ಶ್ರೀಲಂಕಾ ಮತ್ತು ನೈಋತ್ಯ ಬಂಗಾಳ ಕೊಲ್ಲಿಯ ಸಮೀಪದಲ್ಲಿರುವ ಈ ಚಂಡಮಾರುತವು ಸ್ವಲ್ಪ ತೀವ್ರಗೊಂಡಿದೆ ಮತ್ತು ನವೆಂಬರ್ 30ರ ಮುಂಜಾನೆ ಉತ್ತರ ತಮಿಳುನಾಡು–ಪುದುಚೇರಿ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ.
ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಉತ್ತರ–ವಾಯವ್ಯ ದಿಕ್ಕಿಗೆ ಚಲಿಸುತ್ತಿದ್ದು, ಈಗ ಕಾರೈಕಲ್‌ನಿಂದ ಸುಮಾರು 220 ಕಿ.ಮೀ ದೂರದಲ್ಲಿದೆ. ಐಎಂಡಿ ಹೇಳುವಂತೆ, ಇದು ಉತ್ತರ ತಮಿಳುನಾಡು–ದಕ್ಷಿಣ ಆಂಧ್ರಪ್ರದೇಶ ಕರಾವಳಿ ಭಾಗವನ್ನು ತಲುಪುವ ನಿರೀಕ್ಷೆಯಿದೆ. ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಕರಾವಳಿ ಆಂಧ್ರಪ್ರದೇಶ, ಯಾನಂ ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ವಿಶೇಷವಾಗಿ ನವೆಂಬರ್ 30ರಂದು, ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮೆಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಎಚ್ಚರಿಕೆಗಳು ಜಾರಿಯಾಗಿದೆ. ಪುದುಚೇರಿ, ಕಡಲೂರು, ಮೈಲಾಡುತುರೈ, ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ಕೇರಳದಲ್ಲಿ ಇಂದು ಭಾರೀ ಮಳೆಯ ನಿರೀಕ್ಷೆ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಇಂದು ಮತ್ತು ನಾಳೆ ಗುಡುಗು–ಮಿಂಚಿನೊಂದಿಗೆ ಮಳೆಯ ಸಾಧ್ಯತೆ ಇದೆ. ಕೇರಳದಲ್ಲಿ ನೀರಿನ ಮಟ್ಟ ಏರಿಕೆಯಿಂದ, ಇಡುಕ್ಕಿ ಜಿಲ್ಲೆಯ ಮೂರು ಜಲಾಶಯಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ತ್ರಿಶೂರ್ ಮತ್ತು ಕೋಝಿಕ್ಕೋಡ್ ಜಲಾಶಯಗಳು ಆರೆಂಜ್ ಅಲರ್ಟ್ ನಲ್ಲಿವೆ.
ಚಂಡಮಾರುತ ಪರಿಣಾಮದಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆ ಗಂಭೀರವಾಗಿ ವ್ಯತಿರೇಕಗೊಂಡಿದೆ. ಇಂದು ಮಾತ್ರ 54 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ತೀವ್ರ ಹವಾಮಾನವನ್ನು ಗಮನಿಸಿ, ತಮಿಳುನಾಡು ಸರ್ಕಾರವು ರಾಜ್ಯದಾದ್ಯಂತ ಎಲ್ಲಾ ಶಾಲೆಗಳಿಗೆ ಇಂದು ರಜೆ ಘೋಷಿಸಿದೆ. ‘ದಿತ್ವಾ’ ಚಂಡಮಾರುತ ಕರಾವಳಿಯನ್ನು ತಲುಪುವ ಹೊತ್ತಿಗೆ ಮಳೆಯ ಪ್ರಮಾಣ, ಗಾಳಿಯ ವೇಗ ಮತ್ತು ಪ್ರವಾಹದ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಸ್ಥಳೀಯ ಆಡಳಿತ ಮತ್ತು ಹವಾಮಾನ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಾಗರಿಕರಿಗೆ ವಿನಂತಿ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

