ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ. ದೇವರಾಜ್, ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರ್.ವಿ. ದೇವರಾಜ್ ಅವರಿಗೆ 67 ವರ್ಷ ವಯಸ್ಸಾಗಿತ್ತು.
ಡಿಸೆಂಬರ್ 3ರಂದು ಹುಟ್ಟುಹಬ್ಬ ಹಿನ್ನೆಲೆ, ಚಾಮುಂಡೇಶ್ವರಿ ದರ್ಶನಕ್ಕೆ ಆರ್.ವಿ. ದೇವರಾಜ್ ತೆರಳಿದ್ರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
1957ರ ಡಿಸೆಂಬರ್ 3ರಂದು ಜನಿಸಿದ್ದ ಆರ್.ವಿ. ದೇವರಾಜ್, ಚಾಮರಾಜಪೇಟೆ ಕ್ಷೇತ್ರದಿಂದ 2 ಬಾರಿ ಮತ್ತು ಒಮ್ಮೆ ಚಿಕ್ಕಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ಸಿಎಂ ಎಸ್.ಎಂ. ಕೃಷ್ಣಾಗಾಗಿ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದರು. ಎಸ್.ಎಂ. ಕೃಷ್ಣ ನಿರೀಕ್ಷೆಯಂತೆಯೇ ಗೆದ್ದು ಬೀಗಿದ್ದರು. ಬಳಿಕ ಎಸ್‌ಎಂಕೆ ಮತ್ತು ದೇವರಾಜ್ ನಡುವಿನ ಆಪ್ತತೆ ಹೆಚ್ಚಿತ್ತು.
ಆರ್.ವಿ. ದೇವರಾಜ್ ಅವರು, ಶಾಸಕರಾಗಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷರಾಗಿ, KPCC ಪ್ರಧಾನ ಕಾರ್ಯದರ್ಶಿ ಮತ್ತು AICC ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು, ಆರ್.ವಿ. ದೇವರಾಜ್ ಅವರ ಅಂತ್ಯಕ್ರಿಯೆಯನ್ನು, ಕನಕಪುರದ ಸೋಮನಹಳ್ಳಿಯ ತೋಟದ ಮನೆಯಲ್ಲಿ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಬೆಂಗಳೂರಿನ ಜೆಸಿ ರಸ್ತೆಯ ಪಕ್ಷದ ಕಚೇರಿ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

