1.
ಪುಟಿನ್ ಭದ್ರತೆಗೆ 5 ಸುತ್ತಿನ ಕೋಟೆ ಸಿದ್ಧ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಭೇಟಿಗೆ ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಐದು ಹಂತಗಳ ಹೈ-ಸೇಕ್ಯುರಿಟಿ ಜಾರಿಯಾಗಿದೆ. ರಷ್ಯಾದ ಅಧ್ಯಕ್ಷೀಯ ಭದ್ರತಾ ದಳದಿಂದ ತರಬೇತಿ ಪಡೆದ ಸಿಬ್ಬಂದಿ, ಭಾರತದ NSG ಕಮಾಂಡೊಗಳು, ಸ್ನೈಪರ್‌ಗಳು, ಜಾಮರ್‌ಗಳು, ಡ್ರೋನ್‌ಗಳು ಹಾಗೂ AI ಆಧಾರಿತ ಮುಖ ಗುರುತು ಪತ್ತೆ ವ್ಯವಸ್ಥೆ ಸೇರಿದಂತೆ ಹಲವು ಮಟ್ಟದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಪುಟಿನ್ ಅವರ ಭದ್ರತೆಯನ್ನು ರಷ್ಯಾ ತಂಡವೇ ನೇರವಾಗಿ ನಿರ್ವಹಿಸುತ್ತಿದ್ದು, ಮೋದಿ–ಪುಟಿನ್ ಭೇಟಿ ಸಂದರ್ಭದಲ್ಲಿ ಭಾರತೀಯ ಎನ್‌ಎಸ್‌ಜಿ ಕಮಾಂಡೊಗಳು ಸಹ ಸೇರಲಿದ್ದಾರೆ. ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಮೇರೆಗೆ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ನಾಳೆ ಸಂಜೆ ದೆಹಲಿಗೆ ಆಗಮಿಸಲಿದ್ದಾರೆ.
2.
ಆಕ್ಸಿಜನ್ ಸಿಲಿಂಡರ್ ಜೊತೆ ಬಂದ ಕಾಂಗ್ರೆಸ್ ಎಂಪಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ವಾಯು ಮಾಲಿನ್ಯ ಬಿಕ್ಕಟ್ಟಿನ ವಿರುದ್ಧ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಆಮ್ಲಜನಕ ಸಿಲಿಂಡರ್ ಹಿಡಿದು ಸಂಸತ್ ಭವನಕ್ಕೆ ಆಗಮಿಸಿ ನಾಟಕೀಯ ಪ್ರತಿಭಟನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯೇ ಮಾಲಿನ್ಯದಿಂದ ಹೆಚ್ಚು ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯ ಹೇಳಿಕೆಗೆ ಬೆಂಬಲ, ಅವರು ವಾಯು ಮಾಲಿನ್ಯವನ್ನು “ಸ್ಲೋ ಮೋಷನ್ ದುರಂತ” ಎಂದು ಹೇಳಿ, ಪ್ರತಿ ವರ್ಷ 34,000 ಜೀವಗಳನ್ನು ಕಸಿದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದರು. ಇದೇ ಸಂದರ್ಭದಲ್ಲಿ ದೆಹಲಿ ಸರ್ಕಾರವು ಡಿಡಿಎಂಎ ಹಾಗೂ ಎಂಸಿಡಿ ಸೇರಿದಂತೆ ಹಲವು ಏಜೆನ್ಸಿಗಳೊಂದಿಗೆ ತುರ್ತು ಸಭೆ ಕರೆದಿದ್ದು, ತಕ್ಷಣದ ಕ್ರಮ ರೂಪಣೆ ಕುರಿತು ಚರ್ಚೆ ನಡೆದಿದೆ. ಆದರೆ ಜಂತರ್ ಮಂತರ್‌ನಲ್ಲಿ ಪ್ರತಿಭಟಿಸಿದ್ದ ನಾಗರಿಕರು, ಸರ್ಕಾರದಿಂದ ವೇಗವಾದ ಹಾಗೂ ದೃಢ ನಿರ್ಧಾರ ಬೇಕೆಂದು ಒತ್ತಾಯಿಸಿದ್ದಾರೆ.
3.
ಬಿಜೆಪಿಗೆ “ಟಾಟಾ” ಚುನಾವಣಾ ಬಾಂಡ್ ಸಿಂಹಪಾಲು
ಚುನಾವಣಾ ಬಾಂಡ್‌ಗಳನ್ನು ದೇಶದಲ್ಲಿ ರದ್ದುಗೊಂಡ ಬಳಿಕ ರಾಜಕೀಯ ಪಕ್ಷಗಳಿಗೆ ದೇಣಿಗೆ ಹರಿವು ಕುಂಠಿತವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಾಜಕೀಯ ಪಕ್ಷಗಳ ಹಣಕಾಸು ಮೂಲಗಳು ಖಾಲಿಯಾಗದಂತೆ ಭಾರತೀಯ ಕಾರ್ಪೊರೇಟ್ ಜಗತ್ತು ನೋಡಿಕೊಂಡಿದೆ. ಚುನಾವಣಾ ಆಯೋಗವು ಪ್ರಕಟಿಸಿರುವ 2024–25 ರ ಚುನಾವಣಾ ಟ್ರಸ್ಟ್‌ಗಳ ದೇಣಿಗೆ ವರದಿ ಪರಿಶೀಲಿಸಿದಾಗ, ಅದರಲ್ಲಿ ಸಿಂಹಪಾಲು ಮೊತ್ತ ಭಾರತೀಯ ಜನತಾ ಪಕ್ಷ ಪಾಲಾಗಿರುವುದು ಬಹಿರಂಗವಾಗಿದೆ. ಟಾಟಾ ಗ್ರೂಪ್ ನಿಯಂತ್ರಿತ Progressive Electoral Trust (PET) 2024–25ರಲ್ಲಿ ಒಟ್ಟು ₹915 ಕೋಟಿಯನ್ನು ರಾಜಕೀಯ ಪಕ್ಷಗಳಿಗೆ ಹಂಚಿದ್ದು, ಅದರಲ್ಲಿ ಬಹುಪಾಲು 83% ಅಂದರೆ ₹757.6 ಕೋಟಿ BJP ಗೆ ಹರಿದುಬಂದಿದೆ. ಕಾಂಗ್ರೆಸ್‌ಗೆ PET ಕೇವಲ ₹77.3 ಕೋಟಿ (8.4%) ದೇಣಿಗೆ ನೀಡಿದೆ. ಇನ್ನೂ BJP ಗೆ ದಾಖಲೆಯ ಅತ್ಯಂತ ದೊಡ್ಡ ದೇಣಿಗೆಯನ್ನು ನೀಡುತ್ತಿರುವ Prudent Electoral Trust ವರದಿ ಪ್ರಕಟವಾಗಿಲ್ಲ. ಅದು ಹೊರಬಂದ ಮೇಲೆ BJP ದೇಣಿಗೆ ಮೊತ್ತ ಇನ್ನಷ್ಟು ಏರಿಕೆ ಕಾಣುವುದು ಖಚಿತ.
4.
ಮೋದಿ ಚಾಯ್‌ವಾಲಾ AI ವಿಡಿಯೋ ಪೋಸ್ಟ್
ಪ್ರಧಾನಿ ನರೇಂದ್ರ ಮೋದಿ ಮೊದಲ ಭಾರಿಗ ಪ್ರಧಾನಿ ಅಭ್ಯರ್ಥಿಯಾದಾಗ ಚಾಯ್ ವಾಲಾ ಎಂದು ಕೈಸುಟ್ಟಿಕೊಂಡಿರುವ ಕಾಂಗ್ರೆಸ್ ಬಳಿಕ ಹಲವು ಬಾರಿ ಮೋದಿ ಅಣಕಿಸಿದೆ. ಇದೀಗ ಮತ್ತೆ ಚಾಯ್ ವಾಲಾ ಮೋದಿ ಎಂದು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿಯನ್ನು ಅವಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚಹಾ ಮಾರುತ್ತಿರುವ ಎಐ ಜನರೇಟೆಡ್ ವಿಡಿಯೋ ಪೋಸ್ಟ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಿರುದ್ದ ಬಿಜೆಪಿ ಕೆಂಡಾಮಂಡಲವಾಗಿದ್ದರೆ, ಸಾರ್ವಜನಿಕ ವಲಯದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್ ಈ ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಈ ಎಐ ವಿಡಿಯೋದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತನಿಧಿಸುವ ರೀತಿ ಚಿತ್ರಿಸಲಾಗಿದೆ. ಮೋದಿ ಹಿಂಭಾಗದಲ್ಲಿ ಭಾರತ ದೇಶದ ಧ್ವಜ, ಇತರ ದೇಶಗಳ ಧ್ವಜ,ಬಿಜೆಪಿ ಧ್ವಜಗಳನ್ನು ಚಿತ್ರಿಸಲಾಗಿದೆ. ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿರುವಂತೆ ದೇಶದ ಪ್ರಮುಖ ನಾಯಕರ ಭೇಟಿ ವೇಳೆ ಕಾಣಿಸಿಕೊಳ್ಳುವ ರೀತಿ ಧ್ವಜಗಳನ್ನು ಚಿತ್ರಿಸಲಾಗಿದೆ. ಈ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರಧಾನಿ ಮೋದಿ, ಚಾಯ್, ಚಾಯ್ ಬೋಲೋ ಚಾಯ್ ಎಂದು ಚಹಾ ಮಾರಾಟ ಮಾಡುತ್ತಿರುವ ವಿಡಿಯೋ ಇದಾಗಿದೆ.
5.
ಬುಲೆಟ್ ಟ್ರೈನ್ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ
ನಮ್ಮ ದೇಶದಲ್ಲಿ ಈಗಾಗಲೇ ಮುಂಬೈ- ಅಹಮದಾಬಾದ್ ನಗರಗಳ ನಡುವೆ ಬುಲೆಟ್ ಟ್ರೇನ್ ನಿರ್ಮಾಣಕ್ಕೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇನ್ನು ದಕ್ಷಿಣದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆಯೂ ಬುಲೆಟ್ ಟ್ರೇನ್ ಕಾರಿಡಾರ್ ಅನ್ನು ನಿರ್ಮಾಣ ಮಾಡುವ ಕಾರ್ಯ ಆರಂಭವಾಗಿದೆ. ಬೆಂಗಳೂರು – ಹೈದರಾಬಾದ್ ನಡುವೆ ಬುಲೆಟ್ ಟ್ರೇನ್ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಮಾಡುವ ಕಾರ್ಯ ಆರಂಭವಾಗಿದೆ. ಬುಲೆಟ್ ಟ್ರೇನ್ ಮಾರ್ಗದ 263 ಕಿ.ಮೀ. ಮಾರ್ಗದಲ್ಲಿ ಮಣ್ಣು ಪರೀಕ್ಷೆಗಾಗಿ ಮತ್ತು ಪ್ರಾಥಮಿಕ ಸರ್ವೇಗಾಗಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಆಂಧ್ರದ ಕರ್ನೂಲ್ ನಿಂದ ಬೆಂಗಳೂರಿಗೆ ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ಟ್ರೇನ್ ಸಂಚರಿಸಲಿದೆ. ತಲುಪಲು 1 ಗಂಟೆ 20 ನಿಮಿಷ ತೆಗೆದುಕೊಳ್ಳಲಿದೆ. ಮುಂಬೈ-ಅಹಮದಾಬಾದ್ ನಡುವಿನ ಮಾರ್ಗದ ಪೈಕಿ ಸೂರತ್- ಬಿಲಿಮೋರ್ ಮಾರ್ಗದಲ್ಲಿ ಬುಲೆಟ್ ಟ್ರೇನ್ 2027 ರ ಡಿಸೆಂಬರ್ ನಲ್ಲಿ ಸಂಚರಿಸಲಿದೆ ಎಂದು ಕೇಂದ್ರದ ರೈಲ್ವೇ ಇಲಾಖೆ ಹೇಳಿದೆ.
6.
ಏರ್‌ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಪರೀಕ್ಷೆ ಯಶಸ್ಸಿ
ತುರ್ತು ಸಂದರ್ಭದಲ್ಲಿ ಫೈಟರ್ ಜೆಟ್ನಿಂದ ಪೈಲಟ್ ಅಥವಾ ಸಿಬ್ಬಂದಿ ಹೊರ ಹಾರಲೆಂದು ವಿಶೇಷವಾದ ಏರ್‌ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಇರುತ್ತದೆ. ಈ ಎಸ್ಕೇಪ್ ಸಿಸ್ಟಂನ ಪರೀಕ್ಷೆ ಮಾಡುವ ವ್ಯವಸ್ಥೆ ಮತ್ತು ಸಾಮರ್ಥ್ಯ ಕೆಲವೇ ದೇಶಗಳಿಗೆ ಇರುವುದು. ಈ ನಾಲ್ಕೈದು ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ಇಂದು ಫೈಟರ್ ಜೆಟ್ನ ಎಸ್ಕೇಪ್ ಸಿಸ್ಟಂ ಅನ್ನು ಹೈಸ್ಪೀಡ್ ರಾಕೆಟ್ ಸ್ಲೆಡ್ ಮೂಲಕ ಪರೀಕ್ಷೆ ಮಾಡಲಾಯಿತು. ಡಿಆರ್ಡಿಒ ನಡೆಸಿದ ಈ ಮಹತ್ವದ ಪರೀಕ್ಷೆ ಯಶಸ್ವಿಯಾಗಿದೆ. ಏರ್‌ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಅನ್ನು ಗಂಟೆಗೆ 800 ಕಿಮೀ ವೇಗದಲ್ಲಿ ಹಳಿಗಳ ಮೇಲೆ ಚಲಾಯಿಸುವಂತೆ ನೋಡಿಕೊಳ್ಳಲಾಯಿತು. ಈ ಭಾರೀ ವೇಗ ನಡುವೆ ಏರ್‌ಕ್ರಾಫ್ಟ್ ಕ್ಯಾನೋಪಿ ಬೇರ್ಪಡುವುದು, ನಂತರ ಎಜೆಕ್ಟ್ ಮಾಡುವುದು, ಹಾಗೂ ಪ್ಯಾರಚೂಟ್ ಮೂಲಕ ಸಿಬ್ಬಂದಿ ಸುರಕ್ಷಿತವಾಗಿ ಇಳಿಯುವುದು, ಇವೆಲ್ಲ ಕಾರ್ಯಗಳು ಯಶಸ್ವಿಯಾಗಿ ನಡೆದವು.
7.
ಚುನಾವಣೆಯಲ್ಲಿ ಸ್ಪರ್ಧಿಸಲು ಅಮೆರಿಕದಿಂದ ಬಂದ ಲೇಡಿ!
ತೆಲಂಗಾಣದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳು ಸಾಮಾನ್ಯವಾದ ವಿಷಯಗಳಲ್ಲ. 3 ಹಂತಗಳಲ್ಲಿ ನಡೆಯುತ್ತಿರುವ ಈ ಸರ್ಪಂಚ್ ಚುನಾವಣೆಗಳ ರಣರಂಗದಲ್ಲಿ ಹಲವು ವಿಶೇಷತೆಗಳು ನಡೆಯುತ್ತಿವೆ. ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ವಿದೇಶಕ್ಕೆ ಹೋಗಿದ್ದವರು ಈಗ ತಮ್ಮ ಲಗೇಜ್ ಪ್ಯಾಕ್ ಮಾಡಿ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ನಾಗರ್ಕರ್ನೂಲ್ ಜಿಲ್ಲೆಯ ಬಿಜಿನೆಪಲ್ಲಿ ಮಂಡಲದಲ್ಲಿ ನಡೆದ ಸರ್ಪಂಚ್ ಚುನಾವಣೆಯ ಸಂದರ್ಭದಲ್ಲಿ ಒಂದು ಕುತೂಹಲಕಾರಿ ಬೆಳವಣಿಗೆ ಸಂಭವಿಸಿದೆ. ಲಟ್ಟುಪಲ್ಲಿ ಗ್ರಾಮ ಪಂಚಾಯತ್‌ನ ಸರ್ಪಂಚ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಮೆರಿಕದಿಂದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಬಹಳ ವರ್ಷಗಳ ನಂತರ ಇಲ್ಲಿನ ಸರ್ಪಂಚ್ ಹುದ್ದೆಯನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಇದರೊಂದಿಗೆ, ಎಲ್ಲಾ ಪಕ್ಷಗಳು ಸರ್ಪಂಚ್ ಹುದ್ದೆಯನ್ನು ಪಡೆಯಲು ತೀವ್ರವಾಗಿ ಸ್ಪರ್ಧಿಸುತ್ತಿವೆ. ಈ ಕ್ರಮದಲ್ಲಿ ಈ ಗ್ರಾಮದ ಶ್ರೀನಿವಾಸ್ ರೆಡ್ಡಿ ಅವರ ಪತ್ನಿ ನಂದಿನಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
8.
ಬಾಂಗ್ಲಾದೇಶಕ್ಕೆ ಗರ್ಭಿಣಿ ಕಳಿಸಲು ಸುಪ್ರೀಂ ಆದೇಶ
ಸುಪ್ರೀಂ ಕೋರ್ಟ್‌ವು ಒಂಬತ್ತು ತಿಂಗಳ ಗರ್ಭಿಣಿ ಸೋನಾಲಿ ಖಾತುನ್ ಮತ್ತು ಆಕೆಯ ಎಂಟು ವರ್ಷದ ಮಗುವನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿಸಿದೆ. ಮಾನವೀಯ ನೆರವು ಆಧಾರದ ಮೇಲೆ ಕುಟುಂಬವನ್ನು ಮರಳಿ ತರಲು ಕೇಂದ್ರವು ನ್ಯಾಯಾಲಯಕ್ಕೆ ಭರವಸೆ ನೀಡಿದೆ. ನ್ಯಾಯಾಲಯವು ಸೋನಾಲಿಯ ಗರ್ಭಾವಸ್ಥೆಯನ್ನು ಪರಿಗಣಿಸಿ, ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಮಗುವಿನ ಆರೈಕೆಯನ್ನು ಸರ್ಕಾರ ಖಚಿತಪಡಿಸಬೇಕು ಎಂಬ ಸೂಚನೆ ನೀಡಿದೆ. ನ್ಯಾಯಮೂರ್ತಿ ಜೋಯ್ಮಾಲಾ ಬಾಗ್ಚಿ, ಸೋನಾಲಿ ಅವರು ಭಾರತೀಯ ಪ್ರಜೆಯಾದ ಭೋಡು ಶೇಖ್ ಅವರ ಮಗಳು ಎಂದು ಹೇಳಿಕೊಂಡಿರುವುದರಿಂದ, ಅವರು ಹಾಗೂ ಅವರ ಮಕ್ಕಳು ಪೌರತ್ವ ಕಾಯ್ದೆಯಡಿ ಭಾರತೀಯರಾಗಬಹುದೆಂದು ಸೂಚಿಸಿದರು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು “ಸರ್ಕಾರ ಕೆಲವೊಮ್ಮೆ ಮಾನವೀಯ ಹಿತಾಸಕ್ತಿಯಲ್ಲಿ ಬಾಗಬೇಕು” ಎಂದು ಹೇಳಿ, ತವರು ವಾಪಸಿನ ವೇಳೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕೇಂದ್ರವನ್ನು ಕೇಳಿದೆ.
9.
ಪಾಕ್ ಪರ ಬೇಹುಗಾರಿಕೆ – ವಕೀಲ ಅಂದರ್
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಬೇಹುಗಾರಿಕೆ ಮತ್ತು ಮಾಹಿತಿ ರವಾನಿಸಿದ ಆರೋಪದ ಮೇಲೆ ಗುರುಗ್ರಾಮದ ವಕೀಲನನ್ನು ಬಂಧಿಸಲಾಗಿದೆ. ಬಂಧಿಸಲಾಗಿರುವ ವಕೀಲ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ. ಮತ್ತು ಹಣ ಪಡೆಯಲು ಏಳು ಬಾರಿ ಅಮೃತಸರಕ್ಕೆ ಭೇಟಿ ನೀಡಿದ್ದ ಎಂದು ಸ್ನೇಹಿತ ಮುಷರಫ್ ಅಲಿಯಾಸ್ ಪರ್ವೇಜ್ ಪೊಲೀಸರಿಗೆ ತಿಳಿಸಿದ್ದಾರೆ. ಮುಷರಫ್ ಪ್ರಕಾರ, 2022 ರಲ್ಲಿ ಸೋಹ್ನಾ ನ್ಯಾಯಾಲಯದಲ್ಲಿ ಇಂಟರ್ನ್‌ಶಿಪ್ ಮಾಡುವಾಗ ಬಂಧಿತ ವಕೀಲ ರಿಜ್ವಾನ್ ಜತೆ ಸ್ನೇಹ ಬೆಳೆಸಿದ್ದರು. ನಂತರ, ಮುಷರಫ್ ನುಹ್ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಲು ಪ್ರಾರಂಭಿಸಿದ್ದರು ಮತ್ತು ರಿಜ್ವಾನ್ ಗುರುಗ್ರಾಮ್ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಿದ್ದ. ಆದಾಗ್ಯೂ, ಇಬ್ಬರೂ ಆಗಾಗ ಕಾನೂನು ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಮತ್ತು ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಹೊರಗೆ ಹೋಗಿದ್ದರು. ಇನ್ನು ರಿಜ್ವಾನ್ ಅವರ ಲ್ಯಾಪ್‌ಟಾಪ್ ಮತ್ತು ಫೋನ್‌ನಲ್ಲಿ ಅನುಮಾನಾಸ್ಪದ ವಹಿವಾಟುಗಳು ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ನುಹ್ ಪೊಲೀಸ್ ತಂಡಗಳು ಪಂಜಾಬ್‌ನಾದ್ಯಂತ ದಾಳಿ ನಡೆಸುತ್ತಿವೆ.
10.
ಪಾಕ್‌ನ ಕರಾಚಿ ದೇಗುಲದಲ್ಲಿ ಭಾರತದ ಸಿನಿಮಾ
‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣದ ‘ಮಹಾವತಾರ ನರಸಿಂಹ’ ಸಿನಿಮಾ 2025ರಲ್ಲಿ ಸೂಪರ್ ಹಿಟ್ ಆಗಿದೆ. 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಭಾರತದ ಮೊದಲ ಆನಿಮೇಟೆಡ್ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ. 2026ರ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಪೈಪೋಟಿ ನೀಡಲು ಈ ಸಿನಿಮಾ ಅರ್ಹತೆ ಪಡೆದಿರುವ ಸುದ್ದಿ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಈಗ ಇನ್ನೊಂದು ಅಚ್ಚರಿಯ ವಿಷಯ ತಿಳಿದುಕೊಂಡಿದೆ. ಪಾಕಿಸ್ತಾನದಲ್ಲಿ ಕೂಡ ‘ಮಹಾವತಾರ ನರಸಿಂಹ’ ಸಿನಿಮಾ ಪ್ರದರ್ಶನ ಕಂಡಿದೆ. ಪಾಕಿಸ್ತಾನದಲ್ಲಿ ಇರುವ ಹಿಂದೂಗಳು ಈ ಸಿನಿಮಾವನ್ನು ನೋಡಿ ಖುಷಿಪಟ್ಟಿದ್ದಾರೆ. ಭಕ್ತ ಪ್ರಹ್ಲಾದನ ಕಥೆಯನ್ನು ಇಟ್ಟುಕೊಂಡು ‘ಮಹಾವತಾರ ನರಸಿಂಹ’ ಸಿನಿಮಾ ಮಾಡಲಾಗಿದೆ. ಭಾರತದಲ್ಲಿ ವಿವಿಧ ಭಾಷೆಗಳಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಬಳಿಕ ಒಟಿಟಿಯಲ್ಲಿ ಕೂಡ ಬಿಡುಗಡೆ ಆಗಿ ಧೂಳೆಬ್ಬಿಸಿತು. ಈಗ ಪಾಕಿಸ್ತಾನದಲ್ಲಿ ಸಹ ಈ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಅದು ಕೂಡ ದೇವಸ್ಥಾನದಲ್ಲಿ ಎಂಬುದು ವಿಶೇಷ.

