1) ಸಿದ್ದರಾಮಯ್ಯ, ಡಿಕೆ ಬೆಂಬಲಿಗರ ಶಕ್ತಿ ಪ್ರದರ್ಶನ
ಸಿಎಂ, ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕವೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮುಂದುವರೆದಿದೆ. ಮಂಗಳೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲೇ, ಸಿದ್ದರಾಮಯ್ಯ ಪರ ಒಂದು ಬಣ, ಡಿ.ಕೆ. ಶಿವಕುಮಾರ್ ಪರ ಮತ್ತೊಂದು ಬಣ, ಜಿದ್ದಿಗೆ ಬಿದ್ದು ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ಭಾಗಿಯಾಗಲು, ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದ್ದರು. ಈ ವೇಳೆ ವೇಣುಗೋಪಾಲ್ ಸಮ್ಮುಖದಲ್ಲೇ ಪಕ್ಷದಲ್ಲಿನ ಒಳ ರಾಜಕೀಯ ಬಯಲಾಗಿದೆ. ಏರ್‌ಪೋರ್ಟ್‌ನಿಂದ ವೇಣುಗೋಪಾಲ್ ಹೊರಗೆ ಬರ್ತಿದ್ದಂತೆ, ಡಿಕೆಶಿ ಪರ ಆಪ್ತ ಮಿಥುನ್ ರೈ ಹಾಗೂ ಬೆಂಬಲಿಗರು ಘೋಷಣೆ ಕೂಗಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇತ್ತ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ, ಅವರ ಬೆಂಬಲಿಗರು ಕೂಡ ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ ಪರಿಣಾಮ, ತಳ್ಳಾಟ-ನೂಕಾಟ ಉಂಟಾಗಿ, ಏರ್‌ಪೋರ್ಟ್‌ನಿಂದ ಎಕ್ಸಿಟ್ ಆಗಲು ವೇಣುಗೋಪಾಲ್ ಹರಸಾಹಸ ಪಡುವಂತಾಯ್ತು.
2) ಮಂಗಳೂರಲ್ಲಿ KCV ಜೊತೆ ಸಿದ್ದು, ದಿಲ್ಲಿಗೆ ಡಿಕೆಶಿ!
ನಾಯಕತ್ವ ಬದಲಾವಣೆ , ಬ್ರೇಕ್ ಫಾಸ್ಟ್ ಮೀಟಿಂಗ್ ನಡುವೆ ರಾಜ್ಯ ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲೇ ಚಟುವಟಿಕೆಗಳು ನಡೆಯುತ್ತಿದೆ. ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಸಭೆ ನಡೆಸಿದ್ದಾರೆ. ನಗುನಗುತ್ತಾ ಚರ್ಚೆ ಮಾಡುತ್ತಿರುವ ಪೋಟೋ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವಿಮಾನ ಸಂಖ್ಯೆ AI 2511ರಲ್ಲಿ, ಸ್ನೇಹಿತನ ಮನೆಯ ಮದುವೆ ಕಾರ್ಯಕ್ರಮ ನೆಪದಲ್ಲಿ ದಿಲ್ಲಿಗೆ ಹೋಗಿದ್ದಾರೆ. ಆದ್ರೆ, ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ. ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಯಾವುದೇ ಗೊಂದಲ ಇಲ್ಲ ಎಂದು ಸಿಎಂ, ಡಿಸಿಎಂ ಹೇಳಿದ್ರು. ಇದೀಗ ಉಭಯ ನಾಯಕರ ನಡವಳಿಕೆ ಭಾರೀ ಅನುಮಾನಕ್ಕೆ ಕಾರಣವಾಗಿದೆ.
3) 30 ದಿನಗಳ ನಂತರ ನಾಯಕತ್ವ ಬದಲಾವಣೆ?
ಸಿದ್ದು ಮತ್ತು ಡಿಕೆಶಿ ನಡುವೆ 2 ಸುತ್ತಿನ ಮಾತುಕತೆ ಆಗುತ್ತಿದ್ದಂತೆ, ಸಚಿವರಾದ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೋಳಿ ಅಲರ್ಟ್ ಆಗಿದ್ದಾರೆ. ಈ ಇಬ್ಬರು ನಾಯಕರು ರಹಸ್ಯ ಮಾತುಕತೆ ನಡೆಸಿರೋ ವಿಚಾರ ಬೆಳಕಿಗೆ ಬಂದಿದೆ. ನಿನ್ನೆ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಪರಮೇಶ್ವರ್ ಭೇಟಿ ನೀಡಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಪರಸ್ಪರ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಇನ್ನು, ಅಧಿಕಾರ ತ್ಯಾಗದ ಕುರಿತು ಬೇಳೂರು ಗೋಪಾಲಕೃಷ್ಣ ಮುಂದೆ ಸಿಎಂ ಆಡಿದ್ದ ಮಾತಿನ ಬಗ್ಗೆ, ಸಚಿವ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂದು ಸಿದ್ದರಾಮಯ್ಯರ ಮಾತನ್ನೇ ಪುನರುಚ್ಚರಿಸಿದ್ದಾರೆ. ಮುಖ್ಯಮಂತ್ರಿಗಳು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ. ಆದರೆ ಮೂವತ್ತು ತಿಂಗಳ ನಂತರವಾದರೂ ಬಿಡಬಹುದು. ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದ್ರೂ ಬಿಡಲೇಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
4) “ಬ್ರೇಕ್‌ಫಾಸ್ಟ್ ಮೀಟಿಂಗ್ ಹೆಣ್ಣು, ಗಂಡು ನೋಡಿದಂತೆ”
ಇನ್ನು, ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ವ್ಯಂಗ್ಯವಾಡಿದ್ದಾರೆ. ಮೊದಲು ಒಂದು ಕಡೆ ಹೆಣ್ಣು ನೋಡಲು ಬರುತ್ತಾರೆ. ಆಮೇಲೆ ಗಂಡು ನೋಡೋಕೆ ಬರುತ್ತಾರೆ. ಈ ಬ್ರೇಕ್‌ಫಾಸ್ಟ್ ಮೀಟಿಂಗ್ ಆ ರೀತಿಯಾಗಿದೆ. ಇರೋದು ಏನಿದೆಯೋ ಅದೇ ಮುಂದುವರಿದುಕೊಂಡು ಹೋಗುತ್ತದೆ. ಯಾವುದೇ ರಿವರ್ಸ್ ಆಗಲ್ಲ. ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದರೆ ಕುರಿ, ಕೋಳಿ ಬಲಿ ಕೊಡುತ್ತಾರೆ. ಆ ರೀತಿಯಾಗಿ ಎರಡೂ ಮನೆಯಲ್ಲಿ ಆಗಿದೆ. ಬದಲಾವಣೆ ಇಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಬದಲಾವಣೆ ಇದ್ರೆ ಹೈಕಮಾಂಡ್ ಹೇಳುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನದ ನಂತರ ಆಗುತ್ತದೆ ಎಂದು ರಾಜಣ್ಣ ಹೇಳಿದ್ರು.
5) ರಣರಂಗವಾದ ಶ್ರೀರಂಗಪಟ್ಟಣ
ಮದ್ದೂರು ಬಳಿಕ ಶ್ರೀರಂಗಪಟ್ಟಣದ ಮಸೀದಿ ಎದುರು ಹೈಡ್ರಾಮ ನಡೆದಿದೆ. ಹನುಮ ಮಾಲಾಧಾರಿಗಳು, ಪೊಲೀಸರ ಮಧ್ಯೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿಚಾರ್ಜ್ ಮಾಡಲಾಗಿದೆ. ಸಂಕೀರ್ತನಾ ಯಾತ್ರೆ ಮಸೀದಿ ಎದುರು ಬರುತ್ತಿದ್ದಂತೆ ಆ ಜಾಗ ನಮ್ಮದು ಎಂದು ಮಾಲಾಧಾರಿಗಳು ಘೋಷಣೆ ಕೂಗಿದ್ದಾರೆ. ಡಿಜೆ ಸದ್ದಿಗೆ ಡ್ಯಾನ್ಸ್ ಮಾಡುತ್ತಾ, ಮಸೀದಿಯಯೊಳಗೆ ನುಗ್ಗಲು ಯತ್ನಿಸಿದ್ದು, ತಳ್ಳಾಟ ನೂಕಾಟ ಉಂಟಾಗಿದೆ. ಈ ವೇಳೆ ಮಾಲಾಧಾರಿಗಳನ್ನು ತಡೆಯಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಬೇರೆ ಮಾರ್ಗದಲ್ಲಿ ಹೋಗುವಂತೆ ಪೊಲೀಸರು ಸೂಚಿಸಿದ್ದಾರೆ. ಭಕ್ತರು-ಖಾಕಿ ಪಡೆ ನಡುವೆ ಮಾತಿನ ಚಕಮಕಿ ನಡೆದಿದೆ. ಮಸೀದಿ ಎದುರು ಕುಳಿತು ಹನುಮ ಭಜನೆ ಮಾಡಲು ಮುಂದಾಗಿದ್ದಾರೆ. ಜೊತೆಗೆ ಮಸೀದಿ ರಸ್ತೆಯಲ್ಲಿ ಯಾತ್ರೆ ಸಾಗುವುದಾಗಿ ಪಟ್ಟು ಹಿಡಿದಿದ್ರು. ಇದೇ ವೇಳೆ ಮಸೀದಿ ಎದುರು ನಿಂಬೆಹಣ್ಣು, ಕರ್ಪೂರ ಇಟ್ಟು, ಆಂಜನೇಯ ದೇಗುಲ ಪುನರ್ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ ಘಟನೆಯೂ ನಡೆದಿದೆ.
6) ಪ್ರಜ್ವಲ್ ರೇವಣ್ಣಗೆ ಬಿಡುಗಡೆ ಭಾಗ್ಯವಿಲ್ಲ
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ, ಮತ್ತೊಂದು ಆಘಾತ ಎದುರಾಗಿದೆ. ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಪ್ರಜ್ವಲ್ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು, ಹೈಕೋರ್ಟ್ ವಜಾಗೊಳಿಸಿದೆ.ಕೆಆರ್ ನಗರ ಮೂಲದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪದಲ್ಲಿ, ಪ್ರಜ್ವಲ್ ರೇವಣ್ಣ ದೋಷಿ ಎಂದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಕುರಿತು, ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಅಪರಾಧಿಯ ವಿರುದ್ದ ಇರುವ ಎಲ್ಲಾ ದಾಖಲೆಗಳು, ಪ್ರಕರಣದ ಗಂಭೀರತೆ ಮತ್ತು ಆರೋಪಿಯ ವಿರುದ್ಧ ಇನ್ನೂ ಪ್ರಕರಣಗಳು ಬಾಕಿ ಇರುವುದನ್ನು ಗಮನದಲ್ಲಿಟ್ಟುಕೊಂಡು, ಅಪರಾಧಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಇತರೆ ಪ್ರಕರಣಗಳ ಮೇಲೆ ಪರಿಣಾಮ ಬೀರಬಹುದು ಎಂದು ಪರಿಗಣಿಸಿ, ಈ ಪ್ರಕರಣದಲ್ಲಿ ಶಿಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಾಮೀನು ನೀಡುವುದು ಯೋಗ್ಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
7) ದರ್ಶನ್ ಅವರ ₹82 ಲಕ್ಷ ಐಟಿ ವಶಕ್ಕೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು, ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್‌ನಲ್ಲಿ ನಡೆದಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಆರೋಪಿ ನಂಬರ್ 2 ಆಗಿದ್ದಾರೆ. ಹೀಗಾಗಿ ಇಂದು ನಟ ದರ್ಶನ್ ಹಾಗೂ ಎ1 ಆರೋಪಿ ಪವಿತ್ರಾಗೌಡ ಸೇರಿದಂತೆ 7 ಮಂದಿ ಆರೋಪಿಗಳು ಜೈಲಿನಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಾಗಿದ್ರು. ಇನ್ನೂಳಿದ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದು, ನೇರವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ರು. ಇತರೆ ಆರೋಪಿಗಳಾದ ನಿಖಿಲ್ ನಾಯ್ಕ್ , ರಾಘವೇಂದ್ರ , ಕೇಶವಮೂರ್ತಿ, ಕಾರ್ತಿಕ್ ಗೈರಾದ್ರು. ಇನ್ನು, ನಟ ದರ್ಶನ್‌ನಿಂದ ಪೊಲೀಸರು ₹82 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು. ಈ ಹಣವನ್ನು ತಮ್ಮ ವಶಕ್ಕೆ ನೀಡುವಂತೆ ಐಟಿ ಅಧಿಕಾರಿಗಳು ಮನವಿ ಮಾಡಿದ್ರು. ಈ ಅರ್ಜಿಯನ್ನು ಸೆಷನ್ಸ್ ಕೋರ್ಟ್ ಪುರಸ್ಕರಿಸಿದ್ದು, ಹಣವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಲಾಗುತ್ತದೆ.
8) ಮೂರು ಮಕ್ಕಳ ತಾಯಿ ಜೀವ ಬಿಟ್ಟಿದ್ದೇಕೆ?
ಗಂಡನನ್ನು ಬಿಟ್ಟು ಮಕ್ಕಳ ಜೊತೆ ತಾಯಿ ಮನೆ ಸೇರಿದ್ದ ಮಹಿಳೆ, ಭೀಕರವಾಗಿ ಕೊಲೆಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮನೆ ಹಿಂದೆ ಬಟ್ಟೆ ತೊಳೆಯುತ್ತಿದ್ದ 32 ವರ್ಷದ ಸಂಧ್ಯಾಳ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಬರ್ಬರ ಹತ್ಯೆ ಮಾಡಲಾಗಿದೆ. ಕಳೆದ 10 ವರ್ಷಗಳ ಹಿಂದೆ ಶಿರಗೋಳದ ರವಿ ಜೊತೆ ಸಂಧ್ಯಾ ಮದುವೆಯಾಗಿತ್ತು. ಇವರಿಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಗಂಡನನ್ನ ಬಿಟ್ಟು ಬಂದಿದ್ದ ಸಂಧ್ಯಾ, ಕಳೆದ 3 ವರ್ಷಗಳಿಂದ ತಾಯಿ ಮನೆಯಲ್ಲಿದ್ರು. ಕೆಲ ದಿನಗಳ ಹಿಂದೆ ಸಂಧ್ಯಾ ನಾಪತ್ತೆಯಾಗಿದ್ದು, ಎಷ್ಟು ಹುಡುಕಿದ್ರೂ ಸಿಕ್ಕಿಲ್ಲ. ಆತಂಕಗೊಂಡ ತಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ರು. ಕಳೆದ ಸೋಮವಾರ ಸಂಜೆ ಸಂಧ್ಯಾ ವಾಪಸ್ ಆಗಿದ್ದು, ತಾನು ಸಂಬಂಧಿಕರ ಮನೆಗೆ ಹೋಗಿದ್ದಾಗಿ ಹೇಳಿದ್ರು. ಇದೀಗ ಸಂಧ್ಯಾ ಕೊಲೆಯಾಗಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂಧ್ಯಾರನ್ನ, ಆಸ್ಪತ್ರೆಗೆ ಕರೆದೊಯ್ಯುಲಾಗ್ತಿತ್ತು. ಆ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.
9) ಆರೋಗ್ಯಾಧಿಕಾರಿ ಹುದ್ದೆ ರದ್ದು ಖಂಡಿಸಿ ಪ್ರೊಟೆಸ್ಟ್
ಜಿಬಿಎ ಹೊರತುಪಡಿಸಿ ಉಳಿದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿರುವ ಆರೋಗ್ಯಾಧಿಕಾರಿ ಸೇರಿ ಒಟ್ಟು 18 ಹುದ್ದೆಗಳನ್ನು ರದ್ದುಪಡಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಕಾರ್ಯಪಾಲಕ ಇಂಜಿನಿಯರ್ ಸೇರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸೀನಿಯರ್ ಪ್ರೋಗ್ರಾಮರ್, ಆಡಳಿತಾಧಿಕಾರಿ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ, ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು 2022ರಲ್ಲಿ ಸರ್ಕಾರಕ್ಕೆ ಪಾಲಿಕೆಯಲ್ಲಿನ 2 ಏಕರೂಪ ವೃಂದ ಮತ್ತು ನೇಮಕಾತಿ ನಿಯಮಗಳು 2011ಕ್ಕೆ ತಿದ್ದುಪಡಿ ಪ್ರಸ್ತಾವ ಸಲ್ಲಿಸಿದ್ದರು. ಪಾಲಿಕೆಯ ಆಸ್ಪತ್ರೆಗಳು ಆರೋಗ್ಯ ಇಲಾಖೆಗೆ ಹಸ್ತಾಂತರ ಆಗಿರುವುದರಿಂದ, ಆರೋಗ್ಯಾಧಿಕಾರಿ ಹುದ್ದೆ ಅಗತ್ಯವಿಲ್ಲ ಎಂದು ತಿದ್ದುಪಡಿ ತಂದಿದೆ., ವಿವಿಧ ವೃಂದದ ಹುದ್ದೆಗಳನ್ನು ರದ್ದುಪಡಿಸಿದೆ. ಈ ಕುರಿತು ಆರ್ಥಿಕ ಇಲಾಖೆಗೆ ಟಿಪ್ಪಣಿ ಸಲ್ಲಿಸಲಾಗಿದೆ. ಹೀಗಾಗಿ ಪಾಲಿಕೆಯಲ್ಲಿನ ಆರೋಗ್ಯಾಧಿಕಾರಿ ಹುದ್ದೆ ರದ್ದಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯ ಪಾಲಿಕೆಯ ಆಯುಕ್ತರ ಕಚೇರಿ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
10) ಮೆಕ್ಕೆಜೋಳದ ರಾಶಿಗೆ ಬೆಂಕಿ ಬಿದ್ದಿದ್ದೇಗೆ..?
ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳದ ರಾಶಿ ಸುಟ್ಟು ಕರಕಲಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಶಂಬಿ ಗ್ರಾಮದಲ್ಲಿ ಘಟನೆ ನಡೆದಿದೆ. ತಮ್ಮ 4 ಎಕರೆ ಜಮೀನಿನಲ್ಲಿ ಧರ್ಮರಾಜ್ ಗಣೇಶಪ್ಪ ಕೆಂಪಲಿಂಗಣ್ಣನವರ ಮೆಕ್ಕೆಜೋಳದ ಬೆಳೆ ಬೆಳೆದಿದ್ರು. ಇದೀಗ ರಾಶಿ ಹಾಕಿದ್ದ ಮೆಕ್ಕೆಜೋಳದ ಬೆಳೆಗೆ ಬೆಂಕಿ ತಗುಲಿದ್ದು, ಸಂಪೂರ್ಣ ನಾಶವಾಗಿದೆ. ಬೆಳೆಗೆ ಬೆಂಕಿ ಹೊತ್ತಿಕೊಂಡಿರುವ ಸುದ್ದಿ ತಿಳಿದು, ತಕ್ಷಣವೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಶಂಕೆ ಇದ್ದು, ತಕ್ಷಣವೇ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

