ಅನರ್ಹ BPL ಕಾರ್ಡ್ಗಳಿಗೆ ಬಹುತೇಕ ಕತ್ತರಿ ಹಾಕಿದ್ದಾಗಿದೆ. ರಾಜ್ಯದಲ್ಲಿ ಅನರ್ಹರು BPL ಕಾರ್ಡ್ ಪಡೆಯುವುದನ್ನು ತಡೆಗಟ್ಟಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹೊಸ ಕ್ರಮಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಹೊಸ BPL ಕಾರ್ಡ್ ಅರ್ಜಿದಾರರ ಮನೆಗೆ ತೆರಳಿ, ಅಧಿಕಾರಿಗಳು ಕುಟುಂಬ ಸದಸ್ಯರ ಜೊತೆಯಲ್ಲಿನ ‘ಸೆಲ್ಫಿ’ಯನ್ನು ಅಟ್ಯಾಚ್ ಮಾಡುವುದು ಕಡ್ಡಾಯವಾಗಲಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ, ರಾಜ್ಯದಲ್ಲಿ ಸುಮಾರು 2.93 ಲಕ್ಷ ಅನರ್ಹ BPL ಕಾರ್ಡ್‌ಗಳನ್ನು APLಗೆ ಪರಿವರ್ತಿಸುವ ಗುರಿ ಇತ್ತು. ಬಹುತೇಕ ಅವುಗಳ ಪರಿಶೀಲನೆ ಪೂರ್ಣಗೊಂಡಿದ್ದು, ಈಗ ಹೊಸ BPL ಮೇಲೆ ಕಟ್ಟುನಿಟ್ಟಿನ ಪರಿಶೀಲನಾ ಪ್ರಕ್ರಿಯೆ ಆರಂಭವಾಗಲಿದೆ.
ಹಾಗಾದ್ರೆ ಏಕೆ ಈ ಹೊಸ ಸೆಲ್ಫಿ ವ್ಯವಸ್ಥೆ? BPL ಕಾರ್ಡ್‌ಗೆ ನಿಗದಿಪಡಿಸಿರುವ ಅರ್ಹತೆಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಸರ್ಕಾರಿ ಆರೋಗ್ಯ ಸೇವೆ ಪಡೆಯಲು ಅನರ್ಹರು ಸುಳ್ಳು ಮಾಹಿತಿ ನೀಡಿ BPL ಪಡೆಯುತ್ತಿರುವ ಪ್ರಕರಣಗಳು ಹೆಚ್ಚಳವಾಗಿವೆ. ಸ್ಥಳ ಪರಿಶೀಲನೆ ಸರಿಯಾಗಿ ನಡೆಯದಿರುವುದು, ಅರ್ಜಿದಾರರ ವಾಸಸ್ಥಳ ಮತ್ತು ಕುಟುಂಬದ ನಿಖರ ಸ್ಥಿತಿ ದಾಖಲಿಸಲು ಹೊಸ ವಿಧಾನ ಅಗತ್ಯವಾಗಿದೆ. ಇದೇ ಕಾರಣಕ್ಕೆ ಅರ್ಜಿದಾರರ ಜೊತೆಗೆ ಸೆಲ್ಫಿ ತೆಗೆದು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಕ್ರಮ ಕೈಗೊಳ್ಳಲಾಗಿದೆ.
ಸೆಲ್ಫಿ ಪರಿಶೀಲನೆ ಹೇಗೆ ನಡೆಯಲಿದೆ? ಅನ್ನೋದನ್ನ ನೋಡೋದಾದ್ರೆ ಆಹಾರ ನಿರೀಕ್ಷಕರಿಗೆ ಕೆಲ ನಿರ್ದೇಶನ ನೀಡಲಾಗಿದೆ. BPL ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ ವಾಸವಿರುವ ಮನೆಯನ್ನು ಭೇಟಿ ಮಾಡಬೇಕು. ಮನೆಯ ಪರಿಸ್ಥಿತಿಯನ್ನು Vertical ಮತ್ತು horizontal ಫೋಟೋಗಳಲ್ಲಿ ಸೆರೆಹಿಡಿಯಬೇಕು. ಮನೆಯಲ್ಲಿರುವ ಕುಟುಂಬದ ಯಜಮಾನ/ಯಜಮಾನಿ ಹಾಗೂ ಇತರ ಸದಸ್ಯರು ಫೋಟೋದಲ್ಲಿ ಕಾಣಿಸಬೇಕು. ಅಧಿಕಾರಿಗಳಿಗೆ ನೀಡಿರುವ ಲಾಗಿನ್ ಪೋರ್ಟಲ್‌ಗೆ ಆ ಸೆಲ್ಫಿ ಮತ್ತು ಮನೆ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.
ತುರ್ತು ಆರೋಗ್ಯ ಸೇವೆಗಳ BPL ಕಾರ್ಡ್ ವಿತರಣೆಯಲ್ಲಿ ಈಗಾಗಲೇ ಇದೇ ಮಾದರಿಯ ಸೆಲ್ಫಿ ದೃಢೀಕರಣವನ್ನ ಬಳಸಲಾಗುತ್ತಿದೆ. ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಈ ವಿಧಾನವನ್ನು ಹೊಸ BPL ಕಾರ್ಡ್ ವಿತರಣೆ ಪ್ರಕ್ರಿಯೆಯಲ್ಲಿಯೂ ಜಾರಿಗೆ ತರಲು ಇಲಾಖೆ ತೀರ್ಮಾನಿಸಿದೆ.
ವರದಿ : ಲಾವಣ್ಯ ಅನಿಗೋಳ

