ಕರ್ನಾಟಕದ ಸಾವಿರಾರು ಅಂಗನವಾಡಿ–ಆಶಾ ಕಾರ್ಯಕರ್ತೆಯರ ಧ್ವನಿಗೆ ಈಗ ದೆಹಲಿಯ ದ್ವಾರಗಳು ತೆರೆಯಲ್ಪಟ್ಟಂತಾಗಿದೆ.ಕಾರ್ಯಕರ್ತೆಯರ ಪರವಾಗಿ ದೆಹಲಿಯಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಮಧ್ಯಸ್ಥಿಕೆವಹಿಸಲಾಗಿದೆ. ಸಾವಿರಾರು ಕಾರ್ಯಕರ್ತೆಯರ ಕಣ್ಣಲ್ಲಿ ಹೊಸ ಭರವಸೆಯ ಬೆಳಕು ಮೂಡೋ ಸಾಧ್ಯತೆ ಹೆಚ್ಚಿದೆ. ಕರ್ನಾಟಕದಲ್ಲಿ ಅಂಗನವಾಡಿ, ಅಕ್ಷರ ದಾಸೋಹ ಮತ್ತು ಆಶಾ ಕಾರ್ಯಕರ್ತೆಯರು ಮುಂದಿಟ್ಟಿರುವ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ಮಟ್ಟದಲ್ಲಿ ಮಹತ್ವದ ಚರ್ಚೆ ನಡೆದಿದೆ.
ಜನಸೇವೆಯೇ ಜನಾರ್ಧನ ಸೇವೆ ಅನ್ನೋಹಾಗೆ ಎಚ್.ಡಿ. ಕುಮಾರಸ್ವಾಮಿ ಆಶಾ ಕಾರ್ಯಕರ್ತೆಯರ ಬೆನ್ನಿಗೆ ನಿಂತಿದ್ದಾರೆ. ಅವರ ಮಧ್ಯಸ್ಥಿಕೆಯಿಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕಾರ್ಯಕರ್ತೆಯರ ಪ್ರತಿನಿಧಿಗಳು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ರಾಜ್ಯದಲ್ಲಿನ ನೌಕರರ ವೇತನ, ಕೆಲಸದ ಒತ್ತಡ ಮತ್ತು ನೀತಿ ಸುಧಾರಣೆ ಸಂಬಂಧಿಸಿದಂತೆ ದೀರ್ಘಕಾಲದಿಂದಲೂ ಪ್ರತಿಭಟನೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಹನ್ನೆರಡು ಮಂದಿ ಪ್ರಮುಖ ಕಾರ್ಯಕರ್ತರ ತಂಡವನ್ನು ನವದೆಹಲಿಗೆ ಕರೆಸಿಕೊಂಡು ಸಚಿವ ಕುಮಾರಸ್ವಾಮಿ ಅವರು ಶಾಸ್ತ್ರೀ ಭವನದಲ್ಲಿ ನಡೆದ ಸಭೆಯಲ್ಲಿ ಅವರ ಪರವಾಗಿ ವಿಷಯವನ್ನು ಮಂಡಿಸಿದರು.ಸಭೆಯಲ್ಲಿ FRS ನೀತಿಯ ಸುಧಾರಣೆ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಂದ ಮುಕ್ತಿಗೊಳಿಸುವುದು, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನವೃದ್ಧಿ, ಕೆಲಸದ ಒತ್ತಡ ಕಡಿತ ಹೀಗೆ ನೌಕರರ ಕಲ್ಯಾಣಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಬೇಡಿಕೆಗಳನ್ನು ಚರ್ಚಿಸಲಾಯಿತು.
ಇವರ ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಬೇಡಿಕೆಗಳನ್ನು ಈಡೇರಿಸಲು ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದಾಗಿ ಸಚಿವೆ ಅನ್ನಪೂರ್ಣದೇವಿ ಭರವಸೆ ನೀಡಿದ್ದಾರೆ. ಈ ಚರ್ಚೆ ಕುಮಾರಸ್ವಾಮಿ ಮಧ್ಯಸ್ಥಿಕೆ – ಬೇಡಿಕೆಗಳ ಈಡೇರಿಕೆಗೆ ವೇಗ ನೀಡಬಹುದಾ? ಅಥವಾ ಇದು ಇನ್ನೊಂದು ರಾಜಕೀಯ ಭರವಸೆ ಅಷ್ಟೇನಾ? HDK ಪ್ರಯತ್ನ ಫಲ ಕೊಡುತ್ತಾ? ನೀವೇನಂತೀರಿ ಕಾಮೆಂಟ್ ಮಾಡಿ.
ವರದಿ : ಲಾವಣ್ಯ ಅನಿಗೋಳ

