Thursday, December 4, 2025

Latest Posts

3 ಅಡಿ ಡಾಕ್ಟ್ರು ರಿಯಲ್ ಹೀರೋ! ಗೇಲಿಗೆ ಕುಳ್ಳನ ಸಾಧನೆಯ ಗೋಲಿ!

- Advertisement -

ಕಳ್ಳನನ್ನಾದರೂ ನಂಬಬಹುದು, ಆದರೆ ಕುಳ್ಳನನ್ನು ನಂಬಬಾರದು ಅನ್ನೋ ನುಡಿಗಟ್ಟು ನಮ್ಮ ಕಡೆ ಪ್ರಸಿದ್ಧ. ಆದರೆ ಆ ನುಡಿಗಟ್ಟನ್ನೇ ತಪ್ಪು ಎಂದು ಸಾಬೀತುಪಡಿಸಿದ್ದಾನೆ ನಮ್ಮ ಭಾರತದ ಒಬ್ಬ ಯುವ ವೈದ್ಯ. ಕೇವಲ ಮೂರು ಅಡಿ ಎತ್ತರ, 18 ಕೇಜಿ ತೂಕ… ಆದರೂ ದೊಡ್ಡ ಕನಸು, ಅದನ್ನು ನಿಜ ಮಾಡಿದ ಬದುಕಿನ ಹೋರಾಟ. ಇದು ಗುಜರಾತ್‌ನ ಯುವ ವೈದ್ಯ ಗಣೇಶ್‌ ಬಾರಯ್ಯ ಅವರ ಕಥೆ.

ಮೂರು ಅಡಿ ಎತ್ತರ… ಆದರೆ ಕನಸು ಹಿಮಾಲಯದಷ್ಟು ದೊಡ್ಡದು. ಗುಜರಾತಿನ ಭಾವ್‌ನಗರ ವೈದ್ಯಕೀಯ ಕಾಲೇಜಿನಲ್ಲಿ ಈಗ ವೈದ್ಯರಾಗಿ ಸೇವೆ ನೀಡುತ್ತಿರುವ 22 ವರ್ಷದ ಗಣೇಶ್‌ ಬಾರಯ್ಯ, ವಿಶ್ವದಲ್ಲೇ ಅತಿ ಕುಳ್ಳ ಎತ್ತರದ ವೈದ್ಯರಲ್ಲೊಬ್ಬರು. ಆಸ್ಪತ್ರೆಯ ಮಂಚದಷ್ಟೇ ಎತ್ತರ ಹೊಂದಿರುವ ಈತನಿಗೆ, ರೋಗಿಗಳನ್ನು ಪರೀಕ್ಷಿಸಲು ಹಾಸಿಗೆ ಪಕ್ಕದಲ್ಲಿ ಕುರ್ಚಿ ಹಾಕಿಕೊಳ್ಳಬೇಕು. ಆದರೂ ಅವರ ತಪಾಸಣೆಯ ಕ್ರಮ, ರೋಗಿಗಳ ಜೊತೆಗಿನ ಮಾತು ಎಲ್ಲವೂ ತುಂಬಾ ಆತ್ಮೀಯ.

ಅವರನ್ನು ನೋಡಿದ ಮೊದಲ ಕ್ಷಣದಲ್ಲಿ ರೋಗಿಗಳು ಮತ್ತು ಕುಟುಂಬಸ್ಥರು ಅಚ್ಚರಿಯಿಂದ, ಕೆಲವೊಮ್ಮೆ ಅನುಮಾನದಿಂದ ನೋಡುತ್ತಾರೆ. ಆದರೆ ಕೆಲವು ನಿಮಿಷ ಮಾತನಾಡಿದ ಮೇಲೆ ಅವರು ಸಂಪೂರ್ಣವಾಗಿ ನೆಮ್ಮದಿಯಾಗುತ್ತಾರೆ. ಗಣೇಶ್‌ ಅವರ ವೈದ್ಯನ ನಿಲುವು, ಸೇವಾ ಮನೋಭಾವ… ಎಲ್ಲವನ್ನೂ ನೋಡಿ ನಂತರ ಅವರು ಗೌರವದಿಂದ ವರ್ತಿಸುತ್ತಾರೆ.

ಗಣೇಶ್‌ ಮೂಲತಃ ಭಾವ್‌ನಗರ ಜಿಲ್ಲೆಯ ಹಳ್ಳಿಯವರು. ರೈತ ಶಿವನಾದ ವಿಠಲ್‌ ಬಾರಯ್ಯ ಮತ್ತು ದೇವುಬೆನ್‌ ದಂಪತಿಗೆ ಒಟ್ಟು 8 ಮಕ್ಕಳು—ಅದರಲ್ಲೂ ಗಣೇಶ್ ಮಾತ್ರ ಏಕೈಕ ಗಂಡುಮಗು. 7 ಹೆಣ್ಣುಮಕ್ಕಳು ಹೆಚ್ಚು ಓದು ಮಾಡಲಿಲ್ಲ, ಎಲ್ಲಾ ಮದುವೆಯಾಗಿದ್ದರು. ಆದರೆ ತಾಯಿ ದೇವುಬೆನ್‌ ಅವರಿಗೆ ಒಂದು ಕನಸು—
“ನನ್ನ ಮಗ ಡಾಕ್ಟರ್ ಆಗಬೇಕು. ಈ ಕನಸು ಕೇಳಿದ ಗಣೇಶ್‌ ದಿನರಾತ್ರಿ ದುಡಿದು ಓದಿ, 12ನೇ ತರಗತಿಯಲ್ಲಿ 87% ಅಂಕ ಪಡೆದು, ಬಳಿಕ ನೀಟ್ ಪರೀಕ್ಷೆಯನ್ನೂ ಪಾಸು ಮಾಡಿದರು.

ಆದರೂ ಅವರ ಎತ್ತರದ ಕಾರಣಕ್ಕೆ ಗುಜರಾತ್ ಸರ್ಕಾರ ಎಂಬಿಬಿಎಸ್ ಸೀಟು ನೀಡಲು ನಿರಾಕರಿಸಿತು. ನಿರಾಶರಾದರೂ ಹಿಂತಿರುಗದ ಗಣೇಶ್‌ — ಹಿತೈಷಿಗಳು, ಕುಟುಂಬದವರ ಜೊತೆಗೂಡಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿದರು. ಸರಿಯಾದ ಹಕ್ಕಿಗಾಗಿ ಹೋರಾಟ ನಡೆಸಿ, ಕೊನೆಗೂ ಅವರಿಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ದೊರೆಯಿತು. ಇಂದು ಅವರು ಯಶಸ್ವಿಯಾಗಿ ತಮ್ಮ ಕೋರ್ಸ್‌ ಪೂರ್ಣಗೊಳಿಸಿ, ಡಾಕ್ಟರ್ ಆಗಿ ಸೇವೆ ಆರಂಭಿಸಿದ್ದಾರೆ.

ಇಂದು ವೈದ್ಯರಾಗಿ ಕೆಲಸ ಮಾಡುತ್ತಿರುವ ಗಣೇಶ್‌ ಬಾರಯ್ಯ ಅವರ ಮುಂದಿನ ಗುರಿ ದೊಡ್ಡದು. ನಾನು ಡರ್ಮಟಾಲಜಿಸ್ಟ್ ಆಗಬೇಕು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಚಿಕಿತ್ಸೆ ಕೊಡಬೇಕು ಎನ್ನುವುದು ಅವರ ಕನಸು. ಎತ್ತರ ಕಡಿಮೆ ಇರಬಹುದು… ಆದರೆ ವ್ಯಕ್ತಿತ್ವ, ಧೈರ್ಯ, ಕನಸು—ಎಲ್ಲಾವೂ ಗಣೇಶ್‌ ಬಾರಯ್ಯನಲ್ಲಿ ದೊಡ್ಡ ಮಟ್ಟದಲ್ಲಿದೆ. ಜನರು ನುಡಿಗಟ್ಟು ರಚಿಸಿದರೂ, ಅದನ್ನು ತಪ್ಪು ಮಾಡಲು ಸಾಕ್ಷಿಯಾದವರು ಗಣೇಶ್‌. ಇದು ಎತ್ತರದ ಅಳೆಯಲ್ಲ, ಸಾಧಿಸುವ ಚಲ ಇದ್ದವನೇ ದೊಡ್ಡವನಾಗುತ್ತಾನೆ ಅನ್ನೋದಕ್ಕೆ ಜೀವಂತ ಉದಾಹರಣೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss