ಹಾವು ಕಚ್ಚಿದಂತೆ ಕನಸು ಕಾಣುವುದು ಸ್ವಪ್ನ ಶಾಸ್ತ್ರದಲ್ಲಿ ಗಂಭೀರ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರಜ್ಞರ ಪ್ರಕಾರ, ಇಂತಹ ಕನಸುಗಳು ವ್ಯಕ್ತಿಯ ಆರೋಗ್ಯ, ಹಣಕಾಸು ಹಾಗೂ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಎಚ್ಚರಿಕೆ ಸಂದೇಶಗಳನ್ನು ನೀಡುತ್ತವೆ. ವಿಶೇಷವಾಗಿ ರಾತ್ರಿ 12 ಗಂಟೆಯ ನಂತರ ಬರುವ ಇಂತಹ ಕನಸುಗಳು ಮುಂದಿನ ದಿನದ ಪರಿಣಾಮಗಳನ್ನೂ ಸೂಚಿಸಬಹುದು.
ಈ ಕನಸು ಬಿದ್ದಾಗ ಅನಾರೋಗ್ಯದ ಲಕ್ಷಣಗಳು ತಲೆದೋರಬಹುದು, ದೇಹದಲ್ಲಿ ನಿತ್ರಾಣ, ಅಲಸ್ಯ ಅಥವಾ ಕ್ರಿಯಾಶೀಲತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಹಣಕಾಸಿನಲ್ಲಿ ನಷ್ಟ, ಕೆಲಸಗಳಲ್ಲಿ ವಿಳಂಬ, ಅಥವಾ ಗುಪ್ತ ಶತ್ರುಗಳಿಂದ ಕಿರಿಕಿರಿ ಎದುರಾಗುವ ಸಾಧ್ಯತೆಯನ್ನು ಸ್ವಪ್ನ ಶಾಸ್ತ್ರ ವಿವರಿಸುತ್ತದೆ. ಆದರೆ ಈ ಫಲಗಳು ಎಲ್ಲರಿಗೂ ಒಂದೇ ರೀತಿಯಾಗಿ ಅನ್ವಯಿಸುವುದಿಲ್ಲ. ವ್ಯಕ್ತಿಯ ವಯಸ್ಸು, ಜೀವನದ ಹಂತ, ತಿಥಿ ಮತ್ತು ಆ ದಿನದ ಸ್ಥಿತಿಗಳ ಆಧಾರದ ಮೇಲೆ ಅರ್ಥದಲ್ಲಿ ವ್ಯತ್ಯಾಸ ಕಂಡುಬರುತ್ತವೆ.
ಸ್ವಪ್ನ ಶಾಸ್ತ್ರದಲ್ಲಿ ದೇಹದಲ್ಲಿರುವ ನವನಾಗ ತತ್ತ್ವವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ನಮ್ಮ ನಾಲಿಗೆ, ಹಣೆಯ ಹಾಗೂ ಬೆನ್ನುಮೂಳೆಗಳಲ್ಲಿ ನಾಗನ ಅಂಶವಿದೆ ಎಂದು ಹೇಳಲಾಗುವುದರಿಂದ, ಮಾತಿನಲ್ಲಿ ಎಚ್ಚರಿಕೆ, ನಕಾರಾತ್ಮಕ ಚಿಂತನೆಗಳನ್ನು ದೂರವಿಡುವುದು ಹಾಗೂ ಶುದ್ಧ ಮತ್ತು ಸತ್ಕಾರ್ಯಗಳಿಗೆ ಒತ್ತು ನೀಡುವುದು ಮುಖ್ಯ. ಬೆನ್ನುಮೂಳೆಯಲ್ಲಿರುವ ಚಕ್ರಗಳು ಸಮತೋಲನದಲ್ಲಿದ್ದರೆ ಜೀವನದಲ್ಲಿ ಪ್ರಗತಿ, ಶಕ್ತಿ ಮತ್ತು ದೀರ್ಘಾಯುಷ್ಯ ದೊರೆಯುತ್ತದೆ ಎಂದು ಶಾಸ್ತ್ರಜ್ಞರು ವಿವರಿಸುತ್ತಾರೆ.
ಇಂತಹ ಕನಸು ಬಿದ್ದಾಗ ಭಯಪಡುವ ಅಗತ್ಯವಿಲ್ಲ. ಮನಸ್ಸನ್ನು ಶಾಂತಗೊಳಿಸಿ ಧನಾತ್ಮಕ ಚಿಂತನೆಗೆ ಒತ್ತು ನೀಡುವುದು ಅತ್ಯಂತ ಮುಖ್ಯ. ಸುಬ್ರಹ್ಮಣ್ಯ ದೇವರ ಆರಾಧನೆ, ಜೊತೆಗೆ ನವನಾಗ ಸ್ತೋತ್ರ — “ಅನಂತಂ ವಾಸುಕಿಂ ಶೇಷಂ…” — ಇವನ್ನು ಪ್ರತಿದಿನ 21 ಬಾರಿ 6 ದಿನಗಳ ಕಾಲ ಜಪಿಸುವುದು ದೋಷ ನಿವಾರಣೆಗೆ ಸಹಾಯಕ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ ಎಂಬ ಭರವಸೆ ಮನಸ್ಸಿನಲ್ಲಿ ಇಟ್ಟುಕೊಂಡರೆ ಆತ್ಮವಿಶ್ವಾಸ ಮತ್ತು ಶಾಂತಿ ದೊರೆಯುತ್ತವೆ…
ವರದಿ : ಗಾಯತ್ರಿ ಗುಬ್ಬಿ

