1) ಡಿಕೆ ನಿವಾಸಕ್ಕೆ ಪ್ರಿಯಾಂಕ್ ಖರ್ಗೆ ಹೋಗಿದ್ದೇಕೆ?
ಕರ್ನಾಟಕ ಕಾಂಗ್ರೆಸ್‌ನಲ್ಲಿ ಎದ್ದಿದ್ದ ಅಧಿಕಾರ ಹಂಚಿಕೆ ಬಿರುಗಾಳಿ, ತುಸು ತಣ್ಣಗಾದಂತೆ ಭಾಸವಾಗ್ತಿತ್ತು. ಈ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವ್ರನ್ನ, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿಯಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಆದರೆ, ಡಿಕೆಶಿ ಜೊತೆಗಿನ ಚರ್ಚೆಯ ಗುಟ್ಟನ್ನು ಪ್ರಿಯಾಂಕ್ ಖರ್ಗೆ ಬಿಟ್ಟುಕೊಟ್ಟಿಲ್ಲ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೂ ಮುನ್ನ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ.
2) ಡಿಕೆಶಿ ಬಳಿಕ ಕೆಪಿಸಿಸಿ ಅಧ್ಯಕ್ಷ ಯಾರು?
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರೂ ಅಲ್ಲ. ಕೋಲಾರ ಉಸ್ತುವಾರಿಯೂ ಅಲ್ಲ. ಆದ್ರೂ ಕೂಡ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೋಲಾರದ ಮಾಲೂರು ತಾಲೂಕು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಗುರುವಾರವಷ್ಟೇ ಮಾಲೂರು ಮುಖಂಡ ಎನ್.ವೆಂಕಟರಾಮ್, ಸತೀಶ್ ಅವರ ಬೆಂಗಳೂರಿನ ಗೃಹ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಮೊದಲು ನಮ್ಮ ಜೊತೆ ಇದ್ದವರು. ಈಗ ವಾಪಸ್ ಬಂದಿದ್ದಾರಷ್ಟೇ ಎಂದ್ರು. ಇನ್ನು, ಡಿಕೆಶಿ ಭೇಟಿ ವಿಚಾರವಾಗಿ ಮಾತನಾಡಿದ್ದು, ಮದುವೆಯಲ್ಲಿ ಇಬ್ಬರು ಭೇಟಿಯಾಗಿದ್ದೆವು ಅಷ್ಟೆ ಎಂದು ಹೇಳಿ ಸೈಲೆಂಟ್ ಆಗಿದ್ದಾರೆ. ಆದರೂ, ಸದ್ಯದ ಬೆಳವಣಿಗೆ ಗಮನಿಸಿದ್ರೆ ಡಿಕೆಶಿ ಬಳಿಕ ಸತೀಶ್ ಕೆಪಿಸಿಸಿ ಅಧ್ಯಕ್ಷರಾಗ್ತಾರಾ ಅನ್ನೋ ಅನುಮಾನ ಮೂಡಿಸಿದೆ.
3) ಸಚಿವ ಸ್ಥಾನದ ಆಕಾಂಕ್ಷಿಯಲ್ಲ.. ತಲೆ ಕೆಡಿಸಿಕೊಳ್ಳಲ್ಲ
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಯಾರನ್ನ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದು ಸಿಎಂ ಪರಮಾಧಿಕಾರ ಎಂದು, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ರು. ಸಂಪುಟ ಪುನರ್ ರಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನಷ್ಟು ಹೆಚ್ಚು ಕಾಲ ಸಚಿವರಾಗಿ ಬೇರೆಯವರು ಇರಲಿಲ್ಲ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಹೀಗಾಗಿ ನಾನು ಸಚಿವ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಸಂಪುಟದಲ್ಲಿ ಯಾರು ಇರಬೇಕು ಅಂತ ಸಿಎಂ ತೀರ್ಮಾನ ಮಾಡ್ತಾರೆ. ಅದು ಪಕ್ಷದ ಪದ್ದತಿ. ಹೈಕಮಾಂಡ್ ಇದೆ. ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷರು ಚರ್ಚೆ ಮಾಡಿ ನಿರ್ಧಾರ ಮಾಡ್ತಾರೆ. ನಾನು ಅದರ ಬಗ್ಗೆ ಏನು ಮಾತಾಡೊಲ್ಲ. ಅದರ ಬಗ್ಗೆ ಗೊತ್ತಿಲ್ಲ ಎಂದು ದೇಶಪಾಂಡೆ ಹೇಳಿದ್ರು.
4) ಪಠ್ಯದಲ್ಲೂ ಭಗವದ್ಗೀತೆ ಬೋಧಿಸಬೇಕು – ಹೆಚ್‌ಡಿಕೆ
ನಮ್ಮ ನೆಲದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಹೀಗಂತ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಹೆಚ್‌ಡಿಕೆ ಪೋಸ್ಟ್ ಮಾಡಿದ್ದಾರೆ. ನಿಷ್ಕಾಮ ಕರ್ಮದ ಕಾಲಾತೀತ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ನೈತಿಕ ಶಕ್ತಿಯು, ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ, ಮೌಲ್ಯಾಧಾರಿತ ಶಿಕ್ಷಣವನ್ನು ಹೆಚ್ಚು ಉತ್ಕೃಷ್ಟಗೊಳಿಸುತ್ತದೆ ಮತ್ತು ನಮ್ಮ ಯುವಜನರು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪ್ರಜೆಗಳಾಗಿ ರೂಪುಗೊಂಡು, ಜಾಗತಿಕವಾಗಿ ಶ್ರೇಷ್ಠರಾಗಲು ಸ್ಫೂರ್ತಿ, ಪ್ರೇರಣೆ ನೀಡುತ್ತದೆ. ಅತ್ಯಂತ ಶ್ರೇಷ್ಠ, ಮಾನವೀಯತೆಯ ಭಾರತೀಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ, ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ಅನುಗುಣವಾಗಿ, ಭಗವದ್ಗೀತೆ ಬೋಧನೆ ಅಗತ್ಯವಿದೆ ಎಂದು ನಾನು ಬಲವಾಗಿ ನಂಬಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
5) KSDL ಗಂಧದ ಎಣ್ಣೆ ಖರೀದಿಯಲ್ಲಿ ಭ್ರಷ್ಟಾಚಾರ?
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ, ಗಂಧದ ಎಣ್ಣೆ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆಯಂತೆ. ಹೀಂತ ಜೆಡಿಎಸ್ ಶಾಸಕ ಹೆಚ್.ಟಿ. ಮಂಜು ಗಂಭೀರ ಆರೋಪ ಮಾಡಿದ್ದಾರೆ. KSDL ಸಾಬೂನು ತೈಲ ಕಚ್ಚಾ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಕಂಪನಿಗೆ ಮಾಹಿತಿ ಕೇಳಿ ಪತ್ರ ಬರೆದಿದ್ದು, ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಗುಡುಗಿದ್ದಾರೆ. ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮಂಜು, 800 ಪುಟಗಳ ವರದಿಯನ್ನ ಪಡೆದಿದ್ದೇವೆ. 9 ಟೆಂಡರ್‌ಗಳ ದಾಖಲೆ ಮಾತ್ರ ಸಿಕ್ಕಿವೆ. ಸರ್ಕಾರದ ಮುಖ್ಯಕಾರ್ಯದರ್ಶಿ, ಇಲಾಖೆಯ ಸಚಿವರು, ಸಿಎಂಗೆ ಪತ್ರ ಬರೆದಿದ್ದು, ಯಾರೊಬ್ಬರೂ ಈವರೆಗೆ ಉತ್ತರ ನೀಡಿಲ್ಲ. ಬ್ಲಾಕ್ ಲಿಸ್ಟ್‌ನಲ್ಲಿರುವ ಕರ್ನಾಟಕ ಅರೋಮಾಸ್ ಎಂಬ ಕಂಪನಿಗೆ ಟೆಂಡರ್ ಕೊಡುತ್ತಾರೆ. ಟೆಂಡರ್‌ನಲ್ಲಿ ನಿಯಮ ಪಾಲಿಸಿಲ್ಲ. ಆಮದು ಮಾಡಿಕೊಳ್ಳುತ್ತಿದ್ದೇವೆ ಅಂತಾರೆ. ಆದರೆ ದಾಖಲೆ ನೀಡುತ್ತಿಲ್ಲ. ಇಲ್ಲಿನ ಎಣ್ಣೆಯನ್ನೇ ಖರೀದಿ ಮಾಡಿದ್ದಾರೆ. ಯಾವುದೇ GST ಕಟ್ಟಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
6) ಬೇಡಿಕೆ ಈಡೇರಿಕೆಗೆ ಹೋರಾಟದ ದಾರಿ ಹಿಡಿದ ನೌಕರರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕೊಪ್ಪಳ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರು, ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ರು. ನಗರದ ಅಶೋಕ್ ವೃತ್ತದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮಾಡಲಾಗಿದೆ.
ಈ ಸಂಘಗಳು ರೈತರ ಜೀವನಾಡಿ ಆಗಿದ್ದು, ಶೂನ್ಯ ಬಡ್ಡಿಗೂ ಸಾಲ ನೀಡುತ್ತಿವೆ. ಆದ್ರೆ, ಬಡ್ಡಿ ಮಾರ್ಜಿನನ್ನು ಶೇಕಡ 3ಕ್ಕೆ ಹೆಚ್ಚಿಸಬೇಕು. ಮತ್ತು ಸಂಘಗಳ ನೌಕರರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸ್ಕೇಲ್ ಆಫ್ ಫೈನಾನ್ಸ್ ಪ್ರಕಾರ ರೈತರಿಗೆ ಬೆಳೆ ಸಾಲ ನೀಡುವುದರ ಜೊತೆಗೆ, ಸಹಕಾರಿ ಸಂಘಗಳ ನೂತನ ಕಚೇರಿ ನಿರ್ಮಾಣಕ್ಕೂ ಅನುದಾನ ನೀಡಬೇಕು. ಯಶಸ್ವಿನಿ ಯೋಜನೆ ಅಡಿಯಲ್ಲಿ ಪ್ರತೀ ಕುಟುಂಬಕ್ಕೆ 100 ರೂಪಾಯಿ ಪ್ರೋತ್ಸಾಹ ಧನ ನಿಗದಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
7) ನವವಿವಾಹಿತರ ಜಾಗದಲ್ಲಿ ಅಪ್ಪ-ಅಮ್ಮ!
ಇಂಡಿಗೋ ವಿಮಾನಗಳಲ್ಲಿ ತಾಂತ್ರಿಕ ತೊಂದರೆ ಹಾಗೂ ಪೈಲಟ್‌ಗಳ ಕೊರತೆಯಿಂದ, ದೇಶದಾದ್ಯಂತ ಹಲವು ವಿಮಾನಗಳು ರದ್ದಾಗಿವೆ. ಇದರ ಎಫೆಕ್ಟ್ ಮದುವೆಗಳ ಮೇಲೂ ಬಿದ್ದಿದೆ. ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಮೇಧಾ ಕ್ಷೀರಸಾಗರ ಹಾಗೂ ಸಂಗಮ ದಾಸ್ ಆರತಕ್ಷತೆ ನಡೆಯಬೇಕಿತ್ತು. ಆದರೆ ಭುವನೇಶ್ವರದಿಂದ ಹುಬ್ಬಳ್ಳಿಗೆ ಬರಬೇಕಿದ್ದ ವಧು-ವರ ಬಂದಿಲ್ಲ. ಹೀಗಾಗಿ ಆನ್‌ಲೈನ್ ಮೂಲಕವೇ ರಿಸೆಪ್ಷನ್‌ನಲ್ಲಿ ನವ ದಂಪತಿ ಭಾಗಿಯಾಗಿದ್ರು. ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ನವ ದಂಪತಿ ಕೂರಬೇಕಿದ್ದ ಜಾಗದಲ್ಲಿ, ವಧುವಿನ ಅಪ್ಪ-ಅಮ್ಮ ಕುಳಿತು, ಆತ್ಮೀಯರು-ಸಂಬಂಧಿಕರ ಶುಭಾಶಗಳನ್ನು ಸ್ವೀಕರಿಸಿದ್ದಾರೆ.
8) ನೇಮಕಾತಿಗೆ ಆಗ್ರಹಿಸಿ KSRTC ಅಭ್ಯರ್ಥಿಗಳ ಪ್ರೊಟೆಸ್ಟ್
ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. 2019-2020ನೇ ಸಾಲಿನಲ್ಲಿ 2,545 KSRTC ಅಭ್ಯರ್ಥಿ ಆಕಾಂಕ್ಷೆಗಳಿದ್ರು. ಆ ಪೈಕಿ ಕೇವಲ 2 ಸಾವಿರ ಅಭ್ಯರ್ಥಿಗಳನ್ನು ಮಾತ್ರ ಸರ್ಕಾರ ನೇಮಕವಾಗಿದ್ರು. ಉಳಿದ ಅಭ್ಯರ್ಥಿಗಳನ್ನ ಕೈಬಿಡಲಾಗಿತ್ತು. ಸರ್ಕಾರ ಮತ್ತು ಸಾರಿಗೆ ಇಲಾಖೆ ನಿರ್ಧಾರಕ್ಕೆ ಆಕಾಂಕ್ಷಿಗಳು ಕೆರಳಿಕೆಂಡವಾಗಿದ್ರು. ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ಆಗ್ರಹಿಸಿ, ನೊಂದ ಆಕಾಂಕ್ಷಿಗಳು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ KSRTC ನೊಂದ ಆಕಾಂಕ್ಷಿಗಳು ಪಾಲ್ಗೊಂಡಿದ್ದಾರೆ. ಇನ್ನು, ಐಎಎಸ್ ಅಧಿಕಾರಿ ನಂದಿನಿ ದೇವಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಅಭ್ಯರ್ಥಿಗಳ ಬೇಡಿಕೆ ಆಲಿಸಿ ಮನವಿ ಪತ್ರ ಸ್ವೀಕರಿಸಿದ್ದಾರೆ.
9) ಚಿತಾಭಸ್ಮ ವಿಸರ್ಜನೆಗೂ ವಿಮಾನವಿಲ್ಲದೇ ಪರದಾಟ!
ಕಳೆದ 2 ದಿನಗಳಿಂದ ಇಂಡಿಗೋ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರಿಂದ, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ತಿ ವಿಸರ್ಜನೆಗೆಂದು ಹರಿದ್ವಾರಕ್ಕೆ ಟಿಕೆಟ್ ಬುಕ್ ಮಾಡಿದ್ದ ಕುಟುಂಬಸ್ಥರು ಕೂಡ, ವಿಮಾನ ಸಿಗದ ಪರದಾಡುವ ಸ್ಥಿತಿ ಎದುರಾಗಿದೆ. ಕುಟುಂಬವೊಂದು ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆಯ ಪೂಜೆಗೆ ತಯಾರಿ ಮಾಡಿಕೊಂಡು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಆದ್ರೆ, ಕೊನೆ ಕ್ಷಣದಲ್ಲಿ ವಿಮಾನ ರದ್ದಾಗಿರುವುದು ತಿಳಿದು ಆಘಾತಕ್ಕೊಳಗಾಗಿದ್ರು. ಅತ್ತ ಹರಿದ್ವಾರದಲ್ಲಿ ಪೂಜೆಗೆ ಎಲ್ಲಾ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ. ಇತ್ತ ಬೆಂಗಳೂರಿನಿಂದ ವಿಮಾನ ಕ್ಯಾನ್ಸಲ್ ಆಗಿದ್ದರಿಂದ ಕುಟುಂಬ ಅಸ್ಥಿಯನ್ನು ಕೈಯ್ಯಲ್ಲೇ ಹಿಡಿದುಕೊಂಡು, ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಕುಳಿತುಕೊಳ್ಳುವಂತಾಗಿತ್ತು. ಮತ್ತು ದಯವಿಟ್ಟು ಅಸ್ಥಿ ವಿಸರ್ಜನೆಗೆ ಅವಕಾಶ ಮಾಡಿಕೊಂಡಿ ಎಂದು ಮನವಿ ಮಾಡಿದ್ದಾರೆ.
10) ಕೃಷಿಯಿಂದಲೇ ದರ್ಶನ್‌ಗೆ 82 ಲಕ್ಷ ರೂ. ಆದಾಯ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ಗೆ, ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ವೇಳೆ ದರ್ಶನ್ ಮನೆಯಲ್ಲಿ 82 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಆ ಹಣವನ್ನ ಸೀಜ್ ಮಾಡಿದ್ರು. ಬಳಿಕ ಹಣದ ಮೂಲ ಕೆದಕಿದ ಅಧಿಕಾರಿಗಳು, ಎಲ್ಲಿಂದ ಬಂತು ಎಂಬ ಬಗ್ಗೆ ಬಳ್ಳಾರಿ ಜೈಲಿಗೂ ತೆರಳಿ ಮಾಹಿತಿ ಕಲೆಹಾಕಿದ್ರು. ಇದೀಗ ಮತ್ತೆ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ ಬಳಿ, 82 ಲಕ್ಷ ಹಣದ ಮೂಲವನ್ನ ಐಟಿ ಕೆದಕಿದೆ. ಹಣದ ಮೂಲ ಏನು? ಇಷ್ಟು ಹಣ ಯಾರು ಕೊಟ್ರು? ಎಲ್ಲಿಂದ ಬಂತು..? ಎಂಬೆಲ್ಲಾ ಐಟಿ ಪ್ರಶ್ನೆ ಮಾಡಿದ್ದಾರೆ. ದರ್ಶನ್ ಕೂಡ ಉತ್ತರ ಕೊಟ್ಟಿದ್ದಾರೆ. ನಾನು ಕೃಷಿ ಮಾಡಿದ್ದೆ, ಪ್ರಾಣಿಗಳ ಮಾರಾಟವನ್ನೂ ಮಾಡಿದ್ದೆ. ಅಲ್ಲದೇ ನನ್ನ ಅಭಿಮಾನಿಗಳು ಹುಟ್ಟುಹಬ್ಬದ ದಿನ ನನಗೆ ದುಡ್ಡು ಕೊಟ್ಟಿದ್ರು ಎಂದಿದ್ದಾರೆ. ನಾನು ಮಾಡಿದ ಕೃಷಿಯಿಂದಲೇ 82 ಲಕ್ಷ ರೂ. ಹಣ ಸಿಕ್ಕಿದ್ದು ಅಂತ, ದರ್ಶನ್ ಹೇಳಿಕೆ ನೀಡಿದ್ದಾರೆ.

