ವಾಲ್ಮೀಕಿ ಭವನಕ್ಕೆ ₹3 ಕೋಟಿ – ಸಚಿವ ಮಹದೇವಪ್ಪ ಭರವಸೆ

ಶ್ರೀರಾಂಪುರದಲ್ಲಿರುವ ತಾಲ್ಲೂಕು ನಾಯಕರ ಸಂಘದ ಆವರಣದಲ್ಲಿ ವರ್ಷಗಳಿಂದ ಅಪೂರ್ಣವಾಗಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಯನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಬುಧವಾರ ಸ್ಥಳೀಯವಾಗಿ ಪರಿಶೀಲಿಸಿದರು. ಪರಿಶೀಲನೆಯ ಬಳಿಕ ಸಂಘದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವರು, ಕಾಲತೀಪು ಕಂಡಿರುವ ವಾಲ್ಮೀಕಿ ಭವನದ ನಿರ್ಮಾಣವನ್ನು ಸಂಪೂರ್ಣಗೊಳಿಸಲು ₹3 ಕೋಟಿ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ನಾನು ಮೊದಲ ಬಾರಿ ಸಚಿವನಾದಾಗಲೇ ಈ ಭವನಕ್ಕೆ ಪ್ರಾಥಮಿಕ ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗಾಗಲೇ ₹1.50 ಕೋಟಿ ಬಿಡುಗಡೆಯಾಗಿದೆ. ತಾಲ್ಲೂಕು ಕೇಂದ್ರ ಮಟ್ಟದಲ್ಲಿ ಅಂಬೇಡ್ಕರ್ ಅಥವಾ ವಾಲ್ಮೀಕಿ ಭವನಗಳಿಗೆ ₹6 ಕೋಟಿ ವರೆಗೆ ಮಂಜೂರಾತಿ ಸಾಧ್ಯತೆ ಇದ್ದು, ಇದೇ ಹಿನ್ನೆಲೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ₹3 ಕೋಟಿ ಹೆಚ್ಚುವರಿ ಅನುದಾನವನ್ನು ದೊರಕಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಭವನದ ಮುಂದಿನ ಹಂತದ ಕಾಮಗಾರಿಗಾಗಿ ತಕ್ಷಣ ಯೋಜನೆ ತಯಾರಿಸಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದ್ದು, ಕೆಲಸಗಳನ್ನು ವೇಗವಾಗಿ ನಡೆಸಿ ಒಂದು ವರ್ಷದೊಳಗೆ ಭವನವನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿದರು. ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, “ತಾಲ್ಲೂಕು ಕೇಂದ್ರದಲ್ಲಿರುವ ವಾಲ್ಮೀಕಿ ಭವನ ಅಪೂರ್ಣವಾಗಿರುವ ವಿಚಾರವನ್ನು ಸಿಎಂ ಮುಂದೆ ಮಂಡಿಸಿ, ಅಗತ್ಯ ಅನುದಾನ ಮಂಜೂರಿಗಾಗಿ ಮನವಿ ಮಾಡುತ್ತೇನೆ. ಸಚಿವರ ಆಶಯದಂತೆ ವರ್ಷಾವಧಿಯೊಳಗೆ ಭವನ ಉದ್ಘಾಟನೆಗೊಳ್ಳುವಂತೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಶಿಕ್ಷಣ ಸಂಸ್ಥೆಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಂಸ್ಥೆಯ ಅಧ್ಯಕ್ಷ ಹೊನ್ನನಾಯಕ ಮನವಿ ಸಲ್ಲಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author