ಹರಿಯಾಣದ ಪಾಣಿಪತ್‌ನಲ್ಲಿ ಬೆಚ್ಚಿಬೀಳಿಸುವ ಸರಣಿ ಮಕ್ಕಳ ಹತ್ಯೆ ಪ್ರಕರಣ ಕೆಲವು ದಿನಗಳ ಹಿಂದಷ್ಟೆ ಬೆಳಕಿಗೆ ಬಂದಿತು. 34 ವರ್ಷದ ಪೂನಂ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಆಕೆ ನಾಲ್ಕು ಮಕ್ಕಳ ಹತ್ಯೆ ಮಾಡಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ. ಆಕೆಯ ಪತಿ ನವೀನ್, ಬರೋಡಾ ಠಾಣೆಯಲ್ಲಿ ದೂರು ನೀಡಿದ ನಂತರ ಈ ದಾರುಣ ಘಟನೆ ಬಹಿರಂಗವಾಯಿತು.
ಪೊಲೀಸರ ಪ್ರಕಾರ, ‘ತನ್ನ ಮಕ್ಕಳಿಗಿಂತ ಹೆಚ್ಚು ಸುಂದರವಾಗಿದ್ದ ಮಕ್ಕಳನ್ನು ಕೊಲ್ಲುವ ಪ್ರೇರಣೆ ಬರುತ್ತಿತ್ತು’ ಎಂದು ಪೂನಂ ಹೇಳಿಕೊಂಡಿದ್ದಾಳೆ. ಇನ್ನೊಬ್ಬ ಮಗುವಿನ ಹತ್ಯೆಗೆ ತನ್ನ ಮಗ ಸಾಕ್ಷಿಯಾಗಿದ್ದಾನೋ ಎಂಬ ಭಯದಿಂದ, ಆಕೆ ತನ್ನ ಸ್ವಂತ ಮಗನನ್ನೇ ಕೊಂದಿರುವುದನ್ನೂ ಒಪ್ಪಿಕೊಂಡಿದ್ದಾಳೆ. ಉಳಿದ ಸಂತ್ರಸ್ತರೂ ಆಕೆಯ ಸಂಬಂಧಿಕರ ಮಕ್ಕಳು. ಅವರ ಸಾವುಗಳನ್ನು ಇದುವರೆಗೆ ಅಪಘಾತವೆಂದು ಭಾವಿಸಲಾಗುತ್ತಿತ್ತು.
ಪೋಲೀಸರ ಮಾಹಿತಿ ಪ್ರಕಾರ, ಪೂನಂ ಮಕ್ಕಳಿಗೆ ಗಿಫ್ಟ್‌ಗಳನ್ನು ಕೊಡುತ್ತಿತ್ತು, ಅವರೊಂದಿಗೆ ಆಟ ಆಡಿ, ನೃತ್ಯ ಮಾಡಿ ಅವರನ್ನು ತನ್ನತ್ತ ಆಕರ್ಷಿಸುತ್ತಿದ್ದಳು. ಈ ಆತ್ಮೀಯ ವರ್ತನೆಯಿಂದ ಮಕ್ಕಳು ಆಕೆಯ ಬಳಿ ಸುರಕ್ಷಿತವಾಗಿದ್ದೇವೆ ಎಂದು ಭಾವಿಸುತ್ತಿದ್ದರು.
ಎಲ್ಲಾ ಕೊಲೆಗಳೂ ದಶಮಿ ಅಥವಾ ಏಕಾದಶಿ ತಿಥಿಗಳಲ್ಲಿ ನಡೆದಿದ್ದು, ಇದು ಯಾವುದೋ ತಾಂತ್ರಿಕ ವಿಧಿವಿಧಾನಗಳ ಭಾಗವಾಗಿರಬಹುದು ಎಂಬ ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ಈ ಧಾರ್ಮಿಕ–ತಾಂತ್ರಿಕ ಕೋಣವನ್ನೂ ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ.
ಜನವರಿ 12, 2023: ಪೂನಂ ತನ್ನ ಮಗ ಶುಭಂ ಹಾಗೂ ಸೋದರಸೊಸೆ ಇಶಿಕಾ ಅವರನ್ನು ಕೊಂದಳು. ದಶಮಿ ಬೆಳಿಗ್ಗೆ ಇತ್ತು, ಸಂಜೆ 4.49 ರಿಂದ ಏಕಾದಶಿ ಪ್ರಾರಂಭವಾಗಿತ್ತು — ಇದೇ ಸಮಯದಲ್ಲಿ ಹತ್ಯೆಗಳು ನಡೆದಿವೆ.
ಆಗಸ್ಟ್ 18, 2025: ತವರು ಗ್ರಾಮ ಸೀವಾಕ್‌ನಲ್ಲಿ ಸೋದರಸೊಸೆ ಜಿಯಾವನ್ನು ಕೊಂದಳು. ಆ ದಿನ ಏಕಾದಶಿ ಸಂಜೆ 5.22ಕ್ಕೆ ಪ್ರಾರಂಭವಾಗಿತ್ತು.
ಡಿಸೆಂಬರ್ 1, 2025: ಪಾಣಿಪತ್‌ನಲ್ಲಿ ಸೋದರಸೊಸೆ ವಿಧಿಯನ್ನು ಹತ್ಯೆ ಮಾಡಲಾಗಿದೆ. ಶುಕ್ಲ ಪಕ್ಷದ ಏಕಾದಶಿ ನವೆಂಬರ್ 30 ರ ರಾತ್ರಿ 9.29 ರಿಂದ ಡಿಸೆಂಬರ್ 1 ರ ಸಂಜೆ 7.01 ರವರೆಗೆ ಜಾರಿಯಲ್ಲಿತ್ತು.
ಪುನಃ–ಪುನಃ ಒಂದೇ ತಿಥಿಯನ್ನು ಆಯ್ಕೆ ಮಾಡಿಕೊಂಡಿರುವುದು, ಈ ಕೊಲೆಗಳ ಹಿಂದೆ ಪೂರ್ವಯೋಜನೆ ಹಾಗೂ ವಿಧಿವಿಧಾನಗಳ ಅಡಕವಾಗಿರುವ ಸಾಧ್ಯತೆಯನ್ನು ಬಲಪಡಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




