ಶಬರಿಮಲೆಯಲ್ಲಿ ಮಂಡಲ ಋತುವಿನ ಭಕ್ತರ ಹರಿವು ತೀವ್ರಗೊಂಡಿದ್ದು, ಇತ್ತೀಚಿನ ಅಂಕಿಅಂಶಗಳ ಪ್ರಕಾರ 17 ಲಕ್ಷಕ್ಕೂ ಹೆಚ್ಚು ಭಕ್ತರು ಸನ್ನಿಧಿಗೆ ಭೇಟಿ ನೀಡಿದ್ದಾರೆ. ದಿನದಿಂದ ದಿನಕ್ಕೆ ಯಾತ್ರಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿರುವುದರಿಂದ ದೇವಸ್ವಂ ಮಂಡಳಿ ಹಲವು ಹೊಸ ಕ್ರಮಗಳನ್ನು ಜಾರಿಗೆ ತಂದಿದೆ.
ಶುಕ್ರವಾರ 99,677 ಭಕ್ತರು ದರ್ಶನ ಪಡೆದರೆ, ಶನಿವಾರ ಮಧ್ಯಾಹ್ನದೊಳಗೆ 50 ಸಾವಿರಕ್ಕೂ ಹೆಚ್ಚು ಯಾತ್ರಿಕರು ಶಬರಿಮಲೆ ಏರಿದ್ದಾರೆ. ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಪಂಪಾದಲ್ಲಿ ಗುಂಪುಗಳಾಗಿ ಯಾತ್ರಿಕರನ್ನು ನಿಯಂತ್ರಿತವಾಗಿ ಶಬರಿ ಹತ್ತೋಕೆಅವಕಾಶ ಮಾಡಿಕೊಡಲಾಗುತ್ತಿದೆ.
ಸನ್ನಿಧಾನದಲ್ಲಿ ಬಹುನಿರೀಕ್ಷಿತ ಕೇರಳ ಸದ್ಯ ವಿತರಣೆ ಇನ್ನೂ ಮೂರು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು TDB ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ. ದಿನಬಿಟ್ಟು ದಿನ ಸದ್ಯ ಬಡಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಒಂದು ದಿನ ಪುಲಾವ್, ಮುಂದಿನ ದಿನ ಸದ್ಯ ಬಡಿಸುವ ಪ್ರಕ್ರಿಯೆ ಅನುಸರಿಸಲಾಗುತ್ತದೆ.
ಸದ್ಯ ತಯಾರಿಗೆ ಬೇಕಾಗುವ ಸಾಮಗ್ರಿಗಳನ್ನು ಪ್ರಸ್ತುತ ಟೆಂಡರ್ ವಹಿಸಿರುವ ಗುತ್ತಿಗೆದಾರರಿಂದ ಖರೀದಿಸಲಾಗುವುದು. ಇದರಲ್ಲಿ ಯಾವುದೇ ಕಾನೂನು ಸಮಸ್ಯೆ ಎದುರಾಗದು ಎಂದು ದೇವಸ್ವಂ ಆಯುಕ್ತರು ವರದಿ ನೀಡಿದ್ದಾರೆ. ಸದ್ಯ ಅನ್ನ, ಬೇಳೆ, ಸಾಂಬಾರ್, ಅವಿಲ್, ಉಪ್ಪಿನಕಾಯಿ, ತೋರನ್, ಹಪ್ಪಳ ಮತ್ತು ಪಾಯಸವನ್ನೊಳಗೊಂಡಿದೆ. ಮಧ್ಯಾಹ್ನ 12ರಿಂದ ಸಂಜೆ 3ರ ವರೆಗೆ ಸದ್ಯ ವಿತರಿಸಲಾಗುವುದು.
ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ತಪ್ಪಿಸಲು ಬಾಳೆ ಎಲೆ ಬದಲು ಸ್ಟೀಲ್ ಪಾತ್ರೆ ಮತ್ತು ಸ್ಟೀಲ್ ಗ್ಲಾಸ್‌ಗಳನ್ನು ಬಳಸಲಾಗುವುದು. ಪ್ರಸ್ತುತ ದೇವಸ್ವಂ ಮಂಡಳಿಯ ಅನ್ನದಾನ ನಿಧಿಯಲ್ಲಿ 9 ಕೋಟಿ ರೂ. ಬಾಕಿ ಉಳಿದಿದ್ದು ಯಾವುದೇ ಸಮಸ್ಯೆಯಾಗದು ಎಂದು ಜಯಕುಮಾರ್ ತಿಳಿಸಿದ್ದಾರೆ.
ಡಿ.2ರಿಂದ ಸದ್ಯ ಬಡಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಇದಕ್ಕಿರುವ ವ್ಯವಸ್ಥೆ ಮಾಡುವಲ್ಲಿನ ವಿಳಂಬ ಮತ್ತು ಸದ್ಯಕ್ಕೆ ಬೇಕಾಗುವ ವಸ್ತುಗಳ ಖರೀದಿಯ ಬಗ್ಗೆ ಮಂಡಳಿಯ ಸದಸ್ಯರಲ್ಲಿನ ಭಿನ್ನಾಭಿಪ್ರಾಯಗಳಿಂದ ವಿಳಂಬವಾಗಿದೆ. ಕಾನೂನು ಸಮಸ್ಯೆಗಳನ್ನು ಅಧ್ಯಯನ ಮಾಡಲು ದೇವಸ್ವಂ ಆಯುಕ್ತರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿತ್ತು.
ವರದಿ : ಲಾವಣ್ಯ ಅನಿಗೋಳ




