ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಹಗುರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಧಾರವಾಡದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಮಹಿಳಾ ಸದಸ್ಯೆಯರು, ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವತೆ ರೂಪದಲ್ಲಿ ಕಾಣಲಾಗುತ್ತದೆ. ಭಾರತದ ಹಣಕಾಸು ಖಾತೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಗೌರವ ಕೊಡುವುದನ್ನು ಬಿಟ್ಟು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯನವರು, ಅವಳು, ಇವಳು ಎಂದು ಮಾತನಾಡುವ ಮೂಲಕ ತಮ್ಮ ಸಂಸ್ಕೃತಿ ತೋರಿಸಿದ್ದಾರೆ.
ಮಹಿಳೆಗೆ ಗೌರವ ಕೊಡುವುದನ್ನು ಸಿದ್ದರಾಮಯ್ಯ ಮೊದಲು ಕಲಿಯಬೇಕು. ಕೂಡಲೇ ಸಿದ್ದರಾಮಯ್ಯ ಅವರು ನಿರ್ಮಲಾ ಸೀತಾರಾಮನ್ ಅವರಲ್ಲಿ ಕ್ಷಮೆಯಾಚಿಸಿ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಆಗ್ರಹಿಸಿದರು.




