ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಭಯ ಉಂಟಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಮನಸ್ಸಿಗೆ ಧೈರ್ಯ ತುಂಬಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸನಾತನ ಸಂಸ್ಕೃತಿಯಲ್ಲಿ ಕೆಲವು ಆಧ್ಯಾತ್ಮಿಕ ಮಾರ್ಗಗಳನ್ನು ಸೂಚಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಪ್ರಗತಿಯ ಬಗ್ಗೆ ಪೋಷಕರಿಗೂ ಚಿಂತೆಯಿರುವುದರಿಂದ, ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಈ ಕುರಿತು ಶಾಸ್ತ್ರಜ್ಞರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಸ್ಥೈರ್ಯದಿಂದ ಇರಲು ಗಣಪತಿ, ಸರಸ್ವತಿ ಮತ್ತು ಹಯಗ್ರೀವ ದೇವತೆಗಳ ಸ್ಮರಣೆಯನ್ನು ಮಾಡುವುದು ಉತ್ತಮ ಎಂದು ಶಾಸ್ತ್ರಜ್ಞರು ಹೇಳಿದ್ದಾರೆ. ಈ ದೇವತೆಗಳ ಮಂತ್ರಗಳನ್ನು ಜಪಿಸುವುದರಿಂದ ಧೈರ್ಯ, ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಗಣಪತಿಗೆ ‘ಓಂ ಗಂ ಗಣಪತಯೇ ನಮಃ’, ಸರಸ್ವತಿಗೆ ‘ಓಂ ಐಂ ಸರಸ್ವತ್ಯೈ ನಮಃ’, ಮತ್ತು ಹಯಗ್ರೀವರಿಗೆ ‘ಓಂ ಹಯಗ್ರೀವಾಯ ನಮಃ’ ಮಂತ್ರಗಳನ್ನು ಪ್ರತಿದಿನ ಪಠಿಸುವುದು ಉಪಯುಕ್ತ.
ಮಂತ್ರಪಠನದ ಜೊತೆಗೆ ಒಂದು ವಿಶೇಷ ಆಚರಣೆಯನ್ನೂ ಪಾಲಿಸಬಹುದು. ರಾತ್ರಿ ಮಲಗುವ ಮುನ್ನ ದೇವರ ಮನೆಯಲ್ಲಿ ವೀಳ್ಯದೆಲೆಯ ಮೇಲೆ ಶುದ್ಧ ಜೇನುತುಪ್ಪ ಇಟ್ಟು, ಮೂರು ಮಂತ್ರಗಳನ್ನು ಜಪಿಸಿ ದೇವರಿಗೆ ನೈವೇದ್ಯ ಮಾಡಿ ಆರತಿ ಮಾಡಬೇಕು. ಮರುದಿನ ಬೆಳಿಗ್ಗೆ ಸ್ನಾನ ಅಥವಾ ಶುದ್ಧಿಕರ್ಮಗಳ ನಂತರ ಆ ಜೇನುತುಪ್ಪವನ್ನು ಪ್ರಸಾದವಾಗಿ ಸೇವಿಸುವುದು ಜ್ಞಾಪಕಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
ಪರೀಕ್ಷೆಗಳು ಸಮೀಪಿಸಿದಾಗ ಗೋವಿನ ದರ್ಶನ ಮಾಡುವುದನ್ನು ಸಹ ಶುಭವೆಂದು ಶಾಸ್ತ್ರಜ್ಞರು ಹೇಳುತ್ತಾರೆ. ಗೋವಿಗೆ ಬೆಲ್ಲ, ಅಕ್ಕಿ ಅಥವಾ ಬಾಳೆಹಣ್ಣು ನೀಡಿ ಗೌಪ್ಯವಾಗಿ ಪ್ರಾರ್ಥನೆ ಸಲ್ಲಿಸುವುದು ವಿದ್ಯಾರ್ಥಿಗಳಿಗೆ ಮಾನಸಿಕ ಶಾಂತಿ ನೀಡುತ್ತದೆ. ಕೆಲವರು ಸೂಚಿಸುವಂತೆ, ಗೋಮೂತ್ರವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ದೇಹ-ಮನಸ್ಸಿನ ಶುದ್ಧಿ ಆಗಿ ಅಧ್ಯಯನಕ್ಕೆ ಬೇಕಾದ ಏಕಾಗ್ರತೆಯೂ ಹೆಚ್ಚುತ್ತದೆ ಎಂಬ ನಂಬಿಕೆ ಇದೆ….
ವರದಿ : ಗಾಯತ್ರಿ ನಾಗರಾಜ್




