ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಅಂತರಿಕ ಕಲಹ, ನಾಯಕತ್ವ ಎಡೆಬಿಡದೇ ಚರ್ಚೆಗೆ ಗ್ರಾಸವಾಗುತ್ತಿರುವ ಸಮಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗ ಒಂದೆಡೆ ಗುಪ್ತ ಭೇಟಿ ಹಾಗೂ ಭೋಜನ ಕೂಟಗಳನ್ನು ಆಯೋಜಿಸಿಕೊಂಡಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ಔತಣಕೂಟದ ನೆಪದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ, ಬೆಳಗಾವಿಯ ಹೊರವಲಯದಲ್ಲಿರುವ ಖಾಸಗಿ ಫಾರ್ಮ್ಹೌಸ್ನಲ್ಲಿ ಡಿ.ಕೆ. ಶಿವಕುಮಾರ್ ಅವರು ತಡರಾತ್ರಿ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಈ ಕೂಟದಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಸಚಿವ ಮಂಕಾಳ ವೈದ್ಯ, ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರೆಂದು ತಿಳಿದುಬಂದಿದೆ.
ಬಿಜೆಪಿಯಿಂದ ಉಚ್ಚಾಟಿತರಾದ ಮಾಜಿ ಸಚಿವರು ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಕೂಡ ಈ ಕೂಟದಲ್ಲಿ ಹಾಜರಾಗಿರುವುದು ಗಮನಾರ್ಹ ಬೆಳವಣಿಗೆ ಎಂದು ಪಕ್ಷದ ವಲಯಗಳಲ್ಲಿ ಚರ್ಚೆ ಶುರುವಾಗಿದೆ. ಶ್ರೀರಂಗಪಟ್ಟಣದ ರಮೇಶ್ ಬಂಡಿ ಸಿದ್ದೆಗೌಡ, ಕೋಲಾರದ ಕೊತ್ತೂರು ಮಂಜುನಾಥ್, ಮಾಲೂರು ಕೆ.ವೈ. ನಂಜೇಗೌಡ, ಮಾಗಡಿ ಕ್ಷೇತ್ರದ ಎಚ್.ಸಿ. ಬಾಲಕೃಷ್ಣ, ಮದ್ದೂರು ಶಾಸಕ ಉದಯ್ ಗೌಡ ಕದಲೂರು, ಪುತ್ತೂರಿನ ಅಶೋಕ್ ಕುಮಾರ್ ರೈ, ನೆಲಮಂಗಲದ ಎನ್.ಟಿ. ಶ್ರೀನಿವಾಸ್, ಪುಲಕೇಶಿ ನಗರದ ಎ.ಸಿ. ಶ್ರೀನಿವಾಸ್, ಆನೇಕಲ್ನ ಶಿವಣ್ಣ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ರಾಮನಗರದ ಇಕ್ಬಾಲ್ ಹುಸೇನ್, ಕುಣಿಗಲ್ನ ಎಚ್.ಡಿ. ರಂಗನಾಥ್, ಸುರಪುರದ ರಾಜಾ ವೆಂಕಟಪ್ಪ ನಾಯಕ್, ಚನ್ನಪಟ್ಟಣದ ಸಿ.ಪಿ. ಯೋಗೇಶ್ವರ್, ಚಾಮರಾಜದ ಕೆ. ಹರೀಶ್ ಗೌಡ, ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ, ಮಡಿಕೇರಿಯ ಮಂಥರ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರೂ ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ಅವರ ಮನೆಯಲ್ಲಿ ನಡೆದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಜಮೀರ್ ಅಹಮದ್ ಖಾನ್, ಎನ್.ಎ. ಹ್ಯಾರಿಸ್, ಆಸಿಫ್ ಸೇಠ್ ಸೇರಿದಂತೆ ಹಲವರು ಹಾಜರಿದ್ದರು. ಭೋಜನಕೂಟದ ನಂತರ ವಾಲ್ಮೀಕಿ ಸಮುದಾಯದ ಶಾಸಕರು ಪ್ರತ್ಯೇಕವಾಗಿ ದೀರ್ಘ ಚರ್ಚೆ ನಡೆಸಿರುವುದು ಮತ್ತೊಂದು ಕುತೂಹಲ ಮೂಡಿಸುವ ಅಂಶವಾಗಿದೆ.
ಈ ನಡುವೆಯೇ, ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಮಾತನಾಡಿ, “ಸಿದ್ದರಾಮಯ್ಯ ಅವರೇ ಮುಂದುವರೆಯಲಿರುವ ಮುಖ್ಯಮಂತ್ರಿ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಸನ್ನಿವೇಶಗಳ ಮಧ್ಯೆ, ಡಿ.ಕೆ. ಶಿವಕುಮಾರ್ ಅವರು ಭೋಜನಕೂಟದ ನೆಪದಲ್ಲಿ ತಮ್ಮ ಶಕ್ತಿ ಪ್ರದರ್ಶನ ನಡೆಸಿ, ತಮ್ಮೊಂದಿಗೆ ಇರುವ ಶಾಸಕರನ್ನು ಮತ್ತಷ್ಟು ಒಗ್ಗೂಡಿಸಿಕೊಳ್ಳುವ ಯತ್ನ ನಡೆಸುತ್ತಿರುವುದು ರಾಜ್ಯ ರಾಜಕೀಯಕ್ಕೆ ಹೊಸ ಕುತೂಹಲ ತಂದಿದೆ.




