ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ HIV ಸೋಂಕಿನ ಪ್ರಕರಣಗಳು ಗಂಭೀರವಾಗಿ ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲಿನ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಸವಾಲು ಎದುರಾಗಿದೆ. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, 7,400 ಕ್ಕೂ ಹೆಚ್ಚು ಜನರಿಗೆ HIV ಸೋಂಕು ದೃಢಪಟ್ಟಿದ್ದು, ಇವರಲ್ಲಿ 400 ಕ್ಕೂ ಹೆಚ್ಚು ಮಕ್ಕಳೂ ಸೇರಿದ್ದಾರೆ.
ಸೀತಾಮಡಿ ಜಿಲ್ಲಾ ಆಸ್ಪತ್ರೆಯ ART ಕೇಂದ್ರದ ಮಾಹಿತಿಯ ಪ್ರಕಾರ, ಈ ಮಕ್ಕಳು ತಮ್ಮ ಪೋಷಕರಿಂದಲೇ ವೈರಸ್‌ಗೆ ತುತ್ತಾಗಿದ್ದಾರೆ. ಒಬ್ಬ ಅಥವಾ ಇಬ್ಬರೂ ಪೋಷಕರು HIV ಪಾಸಿಟಿವ್ ಆಗಿದ್ದಲ್ಲಿ, ಮಕ್ಕಳಿಗೆ ಸೋಂಕು ಹರಡುವಿಕೆ ಸಾಮಾನ್ಯ ಎಂದು ವೈದ್ಯರು ತಿಳಿಸಿದ್ದಾರೆ.
ART ಕೇಂದ್ರದಲ್ಲಿ ಪ್ರತಿ ತಿಂಗಳು 40 ರಿಂದ 60 ಹೊಸ HIV ಪ್ರಕರಣಗಳು ಪತ್ತೆಯಾಗುತ್ತಿವೆ. ಜೊತೆಗೆ 5,000 ಕ್ಕೂ ಹೆಚ್ಚು ಸೋಂಕಿತರು ನಿಯಮಿತವಾಗಿ ಔಷಧಿಗಳನ್ನು ಪಡೆಯುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸೀತಾಮಡಿಯಲ್ಲಿ ಪ್ರಕರಣಗಳ ಏರಿಕೆಗೆ ಕಾರಣವಾಗಿ ವೈದ್ಯರು ಅರಿವು ಕೊರತೆ, ಪರೀಕ್ಷೆಗೆ ಮುಂದೆ ಬರದಿರುವುದು, ಸಾಂಸ್ಕೃತಿಕ ಕಳಂಕ, ಮತ್ತು ಅಸುರಕ್ಷಿತ ವೈದ್ಯಕೀಯ ಪದ್ಧತಿಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಿದ್ದಾರೆ.
ಪಟನಾ ಜಿಲ್ಲೆಯಲ್ಲಿ 7,923, ಪಶ್ಚಿಮ ಚಂಪಾರಣ್‌ನಲ್ಲಿ 6,827, ಮಧುಬನಿಯಲ್ಲಿ 5,685, ಗಯಾದಲ್ಲಿ 5,529, ಮುಜಫರ್‌ಪುರದಲ್ಲಿ 5,289 HIV ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಹಾಗಾದ್ರೆ ಯಾಕೆ HIV ದೃಢಪಟ್ಟಿದೆ ಅಂದ್ರೆ ಇದಕ್ಕೆ ಮುಖ್ಯ ಕಾರಣಗಳಿವೆ.
ಬಿಹಾರದಲ್ಲಿ ಕೆಲವೊಂದು ಆಚರಣೆ, ಸಂಪ್ರದಾಯ ಪದ್ಧತಿಗಳಿವೆ. ಪಿನ್ ನಿಂದ ಅಥವಾ ಬ್ಲೇಡ್ ನಿಂದ ಹಣೆಗೆ ಚುಚ್ಚುವಂತಹ ಆಚರಣೆಗಳಿವೆ. ಇಲ್ಲಿ ಎಲ್ಲರಿಗು ಒಂದೇ ಪಿನ್ ನಿಂದ ಅಥವಾ ಬ್ಲೇಡ್ ಅನ್ನು ಬಳಕೆ ಮಾಡುವುದರಿಂದ HIV ದೃಢಪಟ್ಟಿರಬಹುದು.
ವರದಿ : ಲಾವಣ್ಯ ಅನಿಗೋಳ




