ತಾಯಿಗೆ ನಿಂದನೆ ಮಾಡಿದ ಅಣ್ಣ… ತಮ್ಮನೇ ಅಣ್ಣನಿಗೆ ಚಟ್ಟ ಕಟ್ಟಿದ

ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕುಟುಂಬ ಕಲಹದ ಹಿನ್ನೆಲೆ, ತಮ್ಮನ ಕೈಯಲ್ಲಿ ಅಣ್ಣನೇ ಹತ್ಯೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಯಾರಬ್ ನಗರದ ಶೆಟ್ಟಿ ಗಾರ್ಡನ್ ನಿವಾಸಿ ಮೊಹಮ್ಮದ್ ಮುಜಾಯಿದ್ (37) ಕೊಲೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದ ಆರೋಪದಲ್ಲಿ ಮೃತನ ತಮ್ಮ ಮೊಹಮ್ಮದ್ ಮುಸಾದ್ (34) ಕೂಡ ಕೈಗಾಯದಿಂದ ಈಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆ ಸೋಮವಾರ ಮುಂಜಾನೆ ಸುಮಾರು 6 ಗಂಟೆ ವೇಳೆಗೆ ಮದರಸಾ ಆವರಣದಲ್ಲಿ ನಡೆದಿದೆ. ಸಹೋದರರಿಬ್ಬರೂ ಅಲ್ಲೇ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಮೃತ ಮುಜಾಯಿದ್ ವಿವಾಹಿತರಾಗಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಕಳೆದ ಕೆಲವು ತಿಂಗಳಿನಿಂದ ಮುಜಾಯಿದ್ ಪ್ರತಿದಿನವೂ ಯಾವುದೋ ಕಾರಣಕ್ಕೆ ತಮ್ಮನ ಮನೆಗೆ ಬಂದು ಜಗಳವಾಡುತ್ತಿದ್ದ ಹಾಗೂ ತಾಯಿಯ ಬಗ್ಗೆ ಅವಮಾನಕಾರಿ ಶಬ್ದಗಳಿಂದ ನಿಂದಿಸುತ್ತಿದ್ದನೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಬುಧವಾರ ಸಂಜೆ, ತಂದೆ-ತಾಯಿಯನ್ನು ಕರೆದುಕೊಂಡು ಮುಜಾಯಿದ್ ಮನೆಗೆ ಹೋದಾಗ ಕೂಡ ತಾಯಿಗೆ ನಿಂದಿಸಿದ ಘಟನೆ ನಡೆದಿದೆ. ಬಳಿಕ ಮನೆಯವರು ಸಮಾಧಾನ ಪಡಿಸಿದ ನಂತರ, ಮನೆ ಸಣ್ಣದಾಗಿ ಇರುವ ಕಾರಣ ಸಹೋದರರಿಬ್ಬರೂ ಮದರಸಾದಲ್ಲಿ ಮಲಗಲು ತೆರಳಿದ್ದರು. ಅಲ್ಲೂ ಇದೇ ವಿಚಾರ ಮತ್ತೆ ಚರ್ಚೆಯಾಗಿದ್ದು, ತಾಯಿಗೆ ನಿಂದಿಸಿದ ವಿಷಯಕ್ಕೆ ಮುಸಾದ್ ಅಣ್ಣನನ್ನು ಪ್ರಶ್ನಿಸಿದ್ದಾನೆ. ವಾಗ್ವಾದ ತೀವ್ರಗೊಂಡ ಪರಿಣಾಮ, ಕೋಪಗೊಂಡ ಮುಸಾದ್ ಚಾಕುವಿಂದ ಮುಜಾಯಿದ್‌ನ ಕುತ್ತಿಗೆ ಮತ್ತು ತಲೆಗೆ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಈ ವೇಳೆ ಮುಸಾದ್ ಕೈಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗ್ಗೆ 6.30ರ ಸುಮಾರಿಗೆ ಸ್ಥಳೀಯರು ಪೊಲೀಸ್ ಸಹಾಯವಾಣಿ ಮೂಲಕ ಮಾಹಿತಿ ನೀಡುವೊಂದಿಗೆ, ಪೊಲೀವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮುಸಾದ್‌ನ ಹೇಳಿಕೆ ಪಡೆದ ನಂತರ ಹೆಚ್ಚಿನ ವಿವರಗಳು ಹೊರಬೀಳಲಿವೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author