ಬೀದರ್ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ಮತ್ತೆ ವಿಷಾದನೀಯ ಘಟನೆಗೆ ಕಾರಣವಾಗಿದೆ. ಭಾಲ್ಕಿ ತಾಲೂಕಿನ ಮೊರಂಬಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಬಿದ್ದು, ಹತ್ತಿರ ನಿಂತಿದ್ದ ಹೋಂಡಾ ಕಾರು ಸಂಪೂರ್ಣ ಜಖಂಗೊಂಡಿದೆ.
ಸೌಭಾಗ್ಯವಶಾತ್, ಕಾರಿನೊಳಗೆ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿ ಹೋಗಿದೆ. ಈ ಅಪಘಾತ ಶಾಲೆಯ ಕಾಂಪೌಂಡ್ ಹತ್ತಿರವೇ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾರಿಯಲ್ಲಿ ತುಂಬಿದ್ದ ಓವರ್‌ಲೋಡ್ ಮರಳನ್ನು ಖಾಲಿ ಮಾಡುವ ಸಂದರ್ಭ ತೂಕದ ಅಸಮತೋಲನದಿಂದ ವಾಹನ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ರಾಶಿ ರಾಶಿಯಾಗಿ ಮರಳನ್ನು ಹಾಕಿರುವುದು ಅಕ್ರಮ ಸಾಗಾಟದಿಂದ ಉಂಟಾಗಿರುವ ಗೊಂದಲವನ್ನು ಸ್ಪಷ್ಟಪಡಿಸುತ್ತದೆ.
ಬೀದರ್ ಜಿಲ್ಲೆಯಲ್ಲಿ ಮರಳು ಮಾಫಿಯಾ ಅತೀವ ಚುರುಕಾಗಿರುವ ನಡುವೆ, ಅಧಿಕಾರಿಗಳು ಮಾತ್ರ ಸೂಕ್ತ ಕ್ರಮ ಕೈಗೊಳ್ಳದೆ ಇರುವುದನ್ನು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು,“ಅಧಿಕಾರಿಗಳು ಎಲ್ಲಿದ್ದಾರೆ? ಯಾವಾಗ ಕ್ರಮ ಕೈಗೊಳ್ಳುತ್ತಾರೆ?” ಎಂಬ ಪ್ರಶ್ನೆಗಳು ಉದ್ಭವಿಸಿರುವುದು ಗಮನಾರ್ಹ. ಘಟನೆಯ ಕುರಿತು ಪೊಲೀಸರು ಮತ್ತು ಸಂಬಂಧಿತ ಇಲಾಖೆ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮಕ್ಕಾಗಿ ಸ್ಥಳೀಯರು ಕಾದುನೋಡುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




