ಬೆಂಗಳೂರಿನ ಗಿರಿನಗರದಲ್ಲಿ ಹೃದಯ ವಿದ್ರಾವಕ ಘಟನೆನಡೆದಿದೆ. ಅಪರೂಪದ ಗಿಳಿಯೊಂದನ್ನು ರಕ್ಷಣೆ ಮಾಡಲು ಹೋಗಿ ಕರೆಂಟ್ ಶಾಕ್ ಹೊಡೆದು ಉದ್ಯಮಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಮಂಡ್ಯದವರಾದ ಇವರು ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಅವರ ಚಿಕ್ಕಮ್ಮ ಖರೀದಿಸಿದ 2 ಲಕ್ಷ ರೂ ಬೆಲೆ ಬಾಳುವ ಫಾರಿನ್ ಗಿಳಿ ಹೈಟೆನ್ಷನ್ ವೈರ್ ಮೇಲೆ ಕುಳಿತ್ತಿತ್ತು. ಅದನ್ನು ರಕ್ಷಣೆ ಮಾಡಲು ಹೋದಾಗ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕ್ಯಾರೆ ಎನ್ನದೆ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಗಿರಿನಗರ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಅಪಾರ್ಟ್‌ಮೆಂಟ್ ಬಳಿ ಹಾದು ಹೋಗಿರುವ ಹೈಟೆನ್ನನ್ ವಿದ್ಯುತ್ ಮಾರ್ಗದ ಕಂಬದ ಮೇಲೆ ಗಿಳಿ ಕುಳಿತಿತ್ತು. ಅದನ್ನು ಕಂಡ ಅರುಣ್ ಕುಮಾರ್ ಅವರು, ವಿದ್ಯುತ್ ಪ್ರವಹಿಸಿ ಗಿಳಿ ಮೃತಪಡಬಹುದು ಎಂಬ ಆತಂಕದಿಂದ ಅದರ ರಕ್ಷಣೆಗೆ ಮುಂದಾಗಿದ್ದರು. ಕಾಂಪೌಂಡ್ ಮೇಲೆ ನಿಂತು ಕಬ್ಬಿಣದ ಪೈಪ್‌ಗೆ ಕೋಲು ಸೇರಿಸಿ ಗಿಳಿಯನ್ನು ಅಲ್ಲಿಂದ ಓಡಿಸಲು ಯತ್ನಿಸಿದ್ದರು. ಆಗ ವಿದ್ಯುತ್ ವೈರ್ ತಾಗಿ ಕಾಂಪೌಂಡ್‌ನಿಂದ ಕೆಳಗೆ ಬಿದ್ದಿದ್ದರು. ವಿದ್ಯುತ್ ಆಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



