ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಗುದ್ದಾಟ ಮಿತಿ ಮೀರುತ್ತಿದ್ದು, ಹೈಕಮಾಂಡ್ ನಿಯಂತ್ರಣಕ್ಕೂ ಸಿಗದಂತಾಗಿದೆ. ಇದು ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರತ್ಯೇಕ ರಿಪೋರ್ಟ್ ಪಡೆಯುತ್ತಿದ್ದಾರೆ. ನಾಯಕ್ವದ ಬಗ್ಗೆ ಬಹಿರಂಗ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಯೊಂದರ ಬೆಳವಣಿಗೆಗಳ ಬಗ್ಗೆ ಮಾಹಿತಿ ತರಿಸಿಕೊಂಡಿದ್ದಾರಂತೆ. ಮತ್ತು ಡಿಸೆಂಬರ್ 20ರ ಬಳಿಕ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವ ಸಾಧ್ಯತೆ ಇದೆ.
ಸರ್ಕಾರ ಮತ್ತು ಪಕ್ಷದ ವರ್ಚಸ್ಸಿನ ದೃಷ್ಟಿಯಿಂದ ಬಹಿರಂಗ ಹೇಳಿಕೆ ಕೊಡದಂತೆ ಹೈಕಮಾಂಡ್ ಕಟ್ಟಪ್ಪಣೆ ಹೊರಡಿಸಿತ್ತು. ಇದರ ಹೊರತಾಗಿಯೂ ಹಲವು ನಾಯಕರು ಹೇಳಿಕೆ ಕೊಡುತ್ತಲೇ ಬರ್ತಿದ್ದಾರೆ. ಬಹಿರಂಗ ಹೇಳಿಕೆಗಳೂ ನಿಂತಿಲ್ಲ. ಹೀಗಾದರೆ ನಮ್ಮ ಮಾತಿಗೆ ಬೆಲೆ ಎಲ್ಲಿದೆ?. ಸಮಾಜ ಮತ್ತು ಕಾರ್ಯಕರ್ತರಿಗೆ ಯಾವ ಸಂದೇಶ ಹೋಗಲಿದೆ?. ನಾವು ಉತ್ತರ ನೀಡುವುದು ಹೇಗೆಂಬ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರಂತೆ.
ಇನ್ನು, ಬೆಳಗಾವಿ ಅಧಿವೇಶನದ ಆರಂಭದಿಂದ ಇಲ್ಲಿಯವರೆಗೆ ರಾಜ್ಯದ ಯಾವೆಲ್ಲಾ ನಾಯಕರು ಏನು ಹೇಳಿಕೆ ನೀಡಿದ್ದಾರೆ?. ಅದರ ಹಿಂದಿನ ಬೆಳವಣಿಗೆಗಳು, ನಡವಳಿಕೆಗಳು, ಪ್ರತಿಕ್ರಿಯೆಗಳು, ಗುಂಪು ಸಭೆಗಳ ಕುರಿತು, 2 ಪ್ರತ್ಯೇಕ ವರದಿಗಳನ್ನು ಹೈಕಮಾಂಡ್ ನಾಯಕರು ತರಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ತಮ್ಮ ನೆಟ್‌ವರ್ಕ್‌ನಲ್ಲಿ ಮಾಹಿತಿ ಕಲೆ ಹಾಕಿದ್ದಾರಂತೆ. ವಿಡಿಯೋ ಸಹಿತ ಹೇಳಿಕೆ ದಾಖಲೆಗಳನ್ನೇ ತರಿಸಿಕೊಂಡಿರುವುದು, ಪರಿಸ್ಥಿತಿಯ ಗಂಭೀರತೆ ಅರಿಯುವ ಪ್ರಯತ್ನ ಮಾಡಿದ್ದಾರೆಂಬ ಮಾಹಿತಿ ಇದೆ.
ಇಡೀ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ತೀರ್ಮಾನವೇ ಅಂತಿಮವಾಗಲಿದೆ. ಸೋನಿಯಾ ಗಾಂಧಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜೇವಾಲ ಜೊತೆಗೂ ಸಮಾಲೋಚನೆ ಮಾಡಿದ್ದಾರೆ. ಜೊತೆಗೆ ರಾಜ್ಯದ ಗುಂಪೊಂದರ ಜತೆ ವರಿಷ್ಠರೆಲ್ಲಾ ನಿರಂತರವಾಗಿ ಸಂಪರ್ಕಲ್ಲಿದ್ದಾರಂತೆ. ಒಟ್ನಲ್ಲಿ ಇನ್ನೊಂದು ವಾರದಲ್ಲಿ ರಾಜ್ಯ ಕಾಂಗ್ರೆಸ್ಸಿನ ಎಲ್ಲಾ ಸಮಸ್ಯೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ.




