FPO Scheme Extension: 2031ರವರೆಗೆ ರೈತ ಉತ್ಪಾದಕ ಸಂಸ್ಥೆಗಳ ಯೋಜನೆ ವಿಸ್ತರಣೆ; ಕೇಂದ್ರದ ನಿರ್ಧಾರ

ಕೇಂದ್ರ ಸರ್ಕಾರ ಪ್ರಾಯೋಜಿತ ರೈತ ಉತ್ಪಾದಕ ಸಂಸ್ಥೆಗಳ—ಎಫ್‌ಪಿಒ—ಯೋಜನೆಯನ್ನು ಮುಂದಿನ ಐದು ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ದೇವೇಶ್ ಚತುರ್ವೇದಿ ತಿಳಿಸಿದ್ದಾರೆ. ಸರ್ಕಾರಿ ನಿಯಮಗಳ ಪಾಲನೆ ಹಾಗೂ ಹಣಕಾಸಿನ ಅಡೆತಡೆಗಳನ್ನು ಪರಿಹರಿಸುವ ಉದ್ದೇಶದಿಂದ 2026ರಿಂದ 2031ರವರೆಗೆ ಈ ಯೋಜನೆಗೆ ವಿಸ್ತರಿಸಲಾಗುತ್ತಿದೆ ಅಂತಾ ಹೇಳಿದ್ರು.

2020ರ ಫೆಬ್ರವರಿಯಲ್ಲಿ ದೇಶದಾದ್ಯಂತ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ರಚನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಈಗಾಗಲೇ 10 ಸಾವಿರ ಎಫ್‌ಪಿಒಗಳು ನೋಂದಣಿಯಾಗಿದ್ದು, ಅವುಗಳಲ್ಲಿ ಬಹುತೇಕ ಕಳೆದ ಎರಡು ವರ್ಷಗಳಲ್ಲಿ ಸ್ಥಾಪನೆಯಾಗಿವೆ. ಹೀಗಾಗಿ ಈ ಸಂಸ್ಥೆಗಳನ್ನು ಸಶಕ್ತಗೊಳಿಸುವ ಅಗತ್ಯವಿದೆ ಎಂದು ಚತುರ್ವೇದಿ ತಿಳಿಸಿದರು. ರೈತರಿಗೆ ಉತ್ತಮ ಬೆಲೆ ಹಾಗೂ ಹೆಚ್ಚಿನ ಆದಾಯ ಒದಗಿಸುವ ಉದ್ದೇಶದಿಂದಲೇ ಎಫ್‌ಪಿಒಗಳ ಕಲ್ಪನೆಯನ್ನು ರೂಪಿಸಲಾಗಿದೆ ಎಂದರು.

ಕಂಪನಿ ಕಾಯ್ದೆಯ ಅಡಿಯಲ್ಲಿ ವಿಧಿಸಲಾದ ನಿಯಮಗಳನ್ನು ಪಾಲಿಸುವುದೇ ಅನೇಕ ಎಫ್‌ಪಿಒಗಳಿಗೆ ದೊಡ್ಡ ಸವಾಲಾಗಿದ್ದು, 3ರಿಂದ 5 ವರ್ಷಗಳವರೆಗೆ ದಂಡದಿಂದ ವಿನಾಯಿತಿ ನೀಡುವಂತೆ ಸಂಸದೀಯ ವ್ಯವಹಾರ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. 2024–25ರ ಆರ್ಥಿಕ ವರ್ಷದಲ್ಲಿ ಎಫ್‌ಪಿಒಗಳ ವಾರ್ಷಿಕ ವಹಿವಾಟು ₹9 ಸಾವಿರ ಕೋಟಿ ತಲುಪಿದ್ದು, ಒಟ್ಟು ವಹಿವಾಟು ₹10 ಸಾವಿರ ಕೋಟಿ ದಾಟುವ ಸಾಧ್ಯತೆ ಇದೆ. ದೇಶದಾದ್ಯಂತ 52 ಲಕ್ಷಕ್ಕೂ ಹೆಚ್ಚು ರೈತರು ಎಫ್‌ಪಿಒಗಳಿಂದ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಪ್ರತ್ಯೇಕವಾಗಿ ನೋಂದಾಯಿತವಾಗಿರುವ 40 ಸಾವಿರದಿಂದ 50 ಸಾವಿರ ಎಫ್‌ಪಿಒಗಳನ್ನು ಸೇರಿಸಿದರೆ, ದೇಶದಲ್ಲಿನ ಒಟ್ಟು ಎಫ್‌ಪಿಒಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಚತುರ್ವೇದಿ ಹೇಳಿದರು. ಪ್ರಸ್ತುತ ದೊಡ್ಡ ಪ್ರಮಾಣದ ವಹಿವಾಟಿಗೆ ಎಫ್‌ಪಿಒಗಳಿಗೆ ನಿಗದಿಪಡಿಸಿರುವ ₹30 ಲಕ್ಷ ಮಿತಿ ಸಾಕಾಗುವುದಿಲ್ಲ. ಬೆಳೆ ಖರೀದಿ ಅಥವಾ ರೈತರಿಗೆ ಮುಂಗಡ ಪಾವತಿ ಮಾಡುವ ಸಂದರ್ಭಗಳಲ್ಲಿ ಈ ಮಿತಿ ಕನಿಷ್ಠ ₹50 ಲಕ್ಷದಿಂದ ₹1 ಕೋಟಿವರೆಗೆ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಎಫ್‌ಪಿಒಗಳಿಗೆ ಸಾಲದ ಗ್ಯಾರಂಟಿ ಹಾಗೂ ಹೆಚ್ಚುವರಿ ಹಣಕಾಸು ನೆರವು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದೂ ಅವರು ಸ್ಪಷ್ಟಪಡಿಸಿದರು. ಈ ನಡುವೆ, ಕೆಲ ಎಫ್‌ಪಿಒಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದು, ನೈಜ ರೈತರ ಭಾಗವಹಿಸುವಿಕೆ ಇಲ್ಲದೆ ಕೇವಲ 3ರಿಂದ 4 ಜನರೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಆತಂಕಕಾರಿ ವಿಷಯ ಎಂದು ಚತುರ್ವೇದಿ ಎಚ್ಚರಿಸಿದರು.

ಸಾಮೂಹಿಕ ಕೃಷಿಯನ್ನು ಉತ್ತೇಜಿಸುವುದು ಎಫ್‌ಪಿಒಗಳ ಮುಖ್ಯ ಉದ್ದೇಶ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ತಂತ್ರಜ್ಞಾನ, ಸಾಲ, ಮಾರುಕಟ್ಟೆ ಸಂಪರ್ಕ ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ಒದಗಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸಲು ಈ ಸಂಸ್ಥೆಗಳು ನೆರವಾಗುತ್ತವೆ. ಎಫ್‌ಪಿಒ ಮೇಳಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ವೇದಿಕೆಯಾಗಿವೆ.

About The Author