ದುಡಿಯುವ ಮಹಿಳೆಗೆ ಜೀವನಾಂಶ ಬೇಕಾ? ಈ ಪ್ರಶ್ನೆಗೆ ಅಲಹಾಬಾದ್ ಹೈಕೋರ್ಟ್ ಸ್ಪಷ್ಟ ಉತ್ತರ ನೀಡಿದ್ದು, ಸ್ವಾವಲಂಬಿಯಾಗಿ ಬದುಕುವ ಮಹಿಳೆಗೆ ಪತಿಯಿಂದ ಜೀವನಾಂಶ ಕೊಡಬೇಕಿಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. ಹೌದು ವಿಚ್ಛೇದಿತ ಮಹಿಳೆ ಸ್ವತಃ ದುಡಿಯುವ ಸಾಮರ್ಥ್ಯ ಹೊಂದಿದ್ದು, ತನ್ನ ಜೀವನವನ್ನು ತಾನು ನಡೆಸುವ ಶಕ್ತಿಯಿದ್ದರೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಂಕಿತ್ ಸಾಹಾ ಎಂಬ ವ್ಯಕ್ತಿ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದರು. ಪತ್ನಿ ಸ್ನಾತಕೋತ್ತರ ಪದವೀಧರಳಾಗಿದ್ದು, ತಿಂಗಳಿಗೆ ಸುಮಾರು 36 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರೂ ಸಹ ಪತಿಯಿಂದ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತಿ ಜೀವನಾಂಶ ನೀಡಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅಂಕಿತ್ ಸಾಹಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣದ ಅಂತಿಮ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್, ಮಹಿಳೆ ಈಗಾಗಲೇ ತಿಂಗಳಿಗೆ 36 ಸಾವಿರ ರೂಪಾಯಿ ಗಳಿಸುತ್ತಿದ್ದು, ಆಕೆಗೆ ಜೀವನ ನಿರ್ವಹಣೆಗೆ ಅಗತ್ಯವಾದ ಸ್ವಾವಲಂಬನೆ ಇದೆ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಆಕೆಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊಣೆಗಾರಿಕೆಗಳಿಲ್ಲ ಎಂದು ಕೋರ್ಟ್ ಗಮನಿಸಿದೆ.
ಇನ್ನೊಂದೆಡೆ, ಪತಿ ತನ್ನ ವಯಸ್ಸಾದ ತಂದೆ-ತಾಯಿಯ ಜವಾಬ್ದಾರಿಯನ್ನು ಹೊತ್ತಿದ್ದು, ಅವರ ಆರೈಕೆಯ ಹೊಣೆ ಹೊಂದಿದ್ದಾನೆ. ಈ ಹಿನ್ನೆಲೆ ಪತಿಯ ಮೇಲೆ ಜೀವನಾಂಶದ ಭಾರ ಹಾಕುವುದು ನ್ಯಾಯಸಮ್ಮತವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಹೀಗಾಗಿ, ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಟ್, ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ, ಕೌಟುಂಬಿಕ ಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಹೈಕೋರ್ಟ್ ಕಠಿಣ ಟೀಕೆ ವ್ಯಕ್ತಪಡಿಸಿದೆ. ಈ ತೀರ್ಪು, ಜೀವನಾಂಶದ ವಿಚಾರದಲ್ಲಿ ಸ್ವಾವಲಂಬನೆ ಹಾಗೂ ಆರ್ಥಿಕ ಸ್ಥಿತಿಯ ಮಹತ್ವವನ್ನು ಪುನಃ ಒತ್ತಿ ಹೇಳುವಂತಾಗಿದೆ.




