ಕೆಲವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುವ ಹಿನ್ನೆಲೆಯಲ್ಲಿ, ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿರುವುದು ಗಮನಾರ್ಹವಾಗಿದೆ. ಆದರೆ ಮಂಗಳೂರಿನ ಅಶೋಕನಗರದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ವಿಶೇಷ, ವಿನೂತನ ಯೋಜನೆಯನ್ನು ಆರಂಭಿಸಿದೆ.
2025-26ನೇ ಶೈಕ್ಷಣಿಕ ವರ್ಷದಲ್ಲಿ ದಾಖಲಾದ 1ರಿಂದ 3ನೇ ತರಗತಿಯ 17 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯನ್ನು ಇಲ್ಲಿ ತೆರೆಯಲಾಗಿದೆ. ವಿಶೇಷವೆಂದರೆ 5 ವರ್ಷದವರೆಗೆ ಅನ್ವಯವಾಗುವಂತೆ ಪ್ರತೀ ವಿದ್ಯಾರ್ಥಿಯ ಹೆಸರಿನಲ್ಲಿ ತಲಾ 5 ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. 17 ವಿದ್ಯಾರ್ಥಿ ಗಳ ಠೇವಣಿಯ ಮೊತ್ತವನ್ನು ಉದ್ಯಮಿ ದಿನಕರ ರಾವ್ ಅವರು ಪಾವತಿಸಿದ್ದಾರೆ. 5 ವರ್ಷದ ನಂತರ ಇದು 6690 ರೂ ಆಗಿರುತ್ತದೆ.
ಆ ವಿದ್ಯಾರ್ಥಿಯಿ 5 ವರ್ಷ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರೆ 5 ವರ್ಷದ ಬಳಿಕ ವಿದ್ಯಾರ್ಥಿ ಆ ಹಣವನ್ನು ಖಾತೆಯಿಂದ ಪಡೆಯಬಹುದಾಗಿದೆ. ಈ ಮೂಲಕ ಕನ್ನಡ ಮಾಧ್ಯಮ ಶಾಲೆಯತ್ತ ಆಕರ್ಷಿಸುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಶಾಲೆಗೆ ಸರ್ಕಾರದ ಪೂರ್ಣಕಾಲಿಕ ಶಿಕ್ಷಕರ ಸೇವೆ ಸಿಗದಿದ್ದರೂ, ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ದಾನಿಗಳ ನೆರವಿನಿಂದ ಶಾಲೆಯ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.
ಈ ಕ್ರಮದಿಂದ ಶತಮಾನದ ಹಳೆಯ ಈ ಶಾಲೆಗೆ ಹೊಸ ಬೆಳಕು ಮೂಡುತ್ತಿದೆ. ಪ್ರಸ್ತುತ ಶಾಲೆಯಲ್ಲಿ ಸುಮಾರು 100 ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ನಿರ್ವಹಿಸುತ್ತಿದ್ದಾರೆ. ಇಂತಹ ನೂತನ ಮತ್ತು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ಕನ್ನಡ ಮಾಧ್ಯಮ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವಲ್ಲಿ ಮಹತ್ವಪೂರ್ಣ ಸಾಧನವಾಗಲಿದೆ ಎಂದು ಶಾಲಾ ಆಡಳಿತವು ತಿಳಿಸಿದೆ.
ವರದಿ : ಲಾವಣ್ಯ ಅನಿಗೋಳ



